ನಾಪತ್ತೆಯಾದ ಮಹಿಳೆ ಕೊಳೆತ ಶವವಾಗಿ ಪತ್ತೆ, ಆರೋಪಿ ಸೆರೆ

 ಕುಂದಾಪುರ: ಕಳೆದ    ಒಂದೂವರೆ    ತಿಂಗಳ        ಹಿಂದೆ ನಾಪತ್ತೆಯಾಗಿದ್ದ ಗೋಳಿಹೊಳೆ ಗ್ರಾಮದ ಪ್ರೇಮಾ ಯಾನೆ ತುಂಗ (32)     ಕೊಲೆಯಾಗಿದ್ದು       ಜಡ್ಕಲ್‌ ಸಮೀಪದ ಚಾರ್‌ಸಾಲ್‌  ನಾಯ್‌ಕೋಡಿ     ದುರ್ಗಮ ಕಾಡಿನಲ್ಲಿ  ಶವ ಪತ್ತೆಯಾಗಿದೆ.
       ಇಲ್ಲಿನ ಮೃತೇರಿ ನಿವಾಸಿ ಪ್ರೇಮಾ ವಿವಾಹಿತರಾಗಿದ್ದು ಎರಡು ಮಕ್ಕಳನ್ನು ಹೊಂದಿದ್ದಾರೆ. ಖಾಸಗಿ ಇನ್ಸೂರೆನ್ಸ್‌ ಕಂಪೆನಿಯ ಎಜೆಂಟ್‌ ಆಗಿದ್ದು ಎಪ್ರಿಲ್‌ 24 ರಂದು ಆನಂದ ಮರಾಠಿ ಎಂಬುವವರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಳು.
      ಬೈಂದೂರು ವೃತ್ತ ನಿರೀಕ್ಷಕ ನೇತ್ರತ್ವದ ತಂಡ ಆನಂದನನ್ನು ಬಂಧಿಸಿ ವಿಚಾರಿಸಿದಾಗ ಪ್ರೇಮಾಳನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಕಾಡಿನಲ್ಲಿ ಎಸೆದಿರುವುದಾಗಿ ತಿಳಿಸಿದ್ದಾನೆ.

       ಬುಧವಾರ ಬೆಳಿಗ್ಗೆ ಆರೋಪಿ ಕೊಲೆ ಮಾಡಿದ ಸ್ಥಳವನ್ನು ತೋರಿಸಿದ್ದು ಕಾಡಿನ ಮದ್ಯದಲ್ಲಿ ಸಂಪೂರ್ಣ ಕೊಳೆತು ಹೋದ ಅಸ್ತಿಪಂಜರ, ತಲೆಬುರುಡೆ,ಬಟ್ಟೆ ಹಾಗೂ ಚಪ್ಪಲಿ ಪತ್ತೆಯಾಗಿದೆ. ಪ್ರೇಮಾ ಕುಟುಂಬದವರ ಸಮಕ್ಷಮ ಗುರುತಿಸಿ ಮಹಜರು ಮಾಡಲಾಗಿದೆ. ಮಣಿಪಾಲದ ವೈದ್ಯಾಧಿಕಾರಿಗಳ ತಂಡ ಶವ ಪರೀಕ್ಷೆ ನಡೆಸಿದ್ದಾರೆ.
     ಕೊಲೆಯಾದ ಪ್ರೇಮಾ 2 ತಿಂಗಳ ಹಿಂದೆ ಕೋಟೇಶ್ವರದಲ್ಲಿ ಲಾ ಟೂ ಲ್ಯಾಂಡ್‌ ಕಾರ್ಯಕ್ರಮದಲ್ಲಿ ಆನಂದ ಪರಿಚಯವಾಗಿದ್ದ ಕೊಲೆಯಾದ ದಿನ ಆಕೆಗೆ ಐದಾರು ಬಾರಿ ಮೊಬೈಲ್‌ ಕರೆ ಮಾಡಿದ್ದು ಇನ್ಸುರೆನ್ಸ್‌ ಕೊಡಿಸುವುದಾಗಿ ಎಂದು ಮನೆಯವರು ಹೇಳಿದ್ದಾರೆ.
      ಆನಂದ ಚಿನ್ನದ ಆಸೆಯಿಂದಾಗಿ ಕೊಲೆಮಾಡಿ ಕರಿಮಣಿ ಸರವನ್ನು ನಾವುಂದದ ಚಿನ್ನದ ಅಂಗಡಿಗೆ ಮಾರಾಟ ಮಾಡಿ ಹೆಂಡತಿಗೆ ಹೊಸ ಚಿನ್ನದ ಸರವನ್ನು ತಂದಿದ್ದಾನೆ. ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದು ಆಕೆಯ ಮೈಮೇಲಿನ ಒಡವೆಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ.

ಆನಂದ ಬೈಂದೂರಿನ ಮರಿ ವೀರಪ್ಪನ್: ಕೊಲೆಯ ಪ್ರಧಾನ ಆರೋಪಿಯಾದ ಆನಂದ ಮರಾಠಿ ಬೈಂದೂರಿನ ಮರಿ ವೀರಪ್ಪನ್‌ ಎಂದೇ ಕುಖ್ಯಾತಗೊಂಡಿದ್ದಾನೆ. ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯ ಹಾಗೂ ವಲಯ ಅರಣ್ಯ ವ್ಯಾಪ್ತಿಯಲ್ಲಿ ಮರಗಳ್ಳನಾಗಿದ್ದು ಹತ್ತಾರು ಮರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಈತ ಮರಕಳ್ಳತನ ಹಾಗೂ ಕಾಡಿನ ಬಗ್ಗೆ ವಿಶೇಷ ಜ್ಞಾನ ಇರುವುದರಿಂದ ಬಂಧಿಸಲು ಸಾಧ್ಯವಾಗಿರಲಿಲ್ಲ. ಈತನನ್ನು ಬೈಂದೂರಿನ ಮರಿ ವೀರಪ್ಪನ್‌ ಎಂದೇ ಕರೆಯುತ್ತಾರೆ.

 ಕೊಲೆಯಾದ ಮಹಿಳೆಯ ಪತಿ ಹಾಗೂ ಮನೆಯವರು ಹೇಳುವ ಪ್ರಕಾರ ಕೊಲೆಯಾದ ಮಹಿಳೆಯ ಸಹೋದರಿಯರ ನಡುವೆ ಜಾಗದ ತಕರಾರು ಇದ್ದಿದ್ದು ಕೆಲವು ತಿಂಗಳ ಹಿಂದೆ ತಂಗಿಯಾದ ಸಿಂಗಾರಿ ಎನ್ನುವವರು ಕಣ್ಣಿಗೆ ಕಾರದ ಪುಡಿ ಹಾಕಿ ರಾಡ್‌ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾಳೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ವ್ಯವಸ್ಥಿತ ತಂತ್ರಗಾರಿಕೆಯಿಂದ ಕೊಲೆ ನಡೆಸಲಾಗಿದೆ 

* ಕೇವಲ ಚಿನ್ನದ ಆಶೆಗಾಗಿ ಮಾತ್ರ ಕೊಲೆ ನಡೆಸಲು ಸಾಧ್ಯವಿಲ್ಲ . ಈತನ ಹಿಂದೆ ಅನೇಕರ ಕೈವಾಡವಿದೆ. ಇನ್ಸೂರೆನ್ಸ್‌ ಹೆಸರಿನಲ್ಲಿ ಕಾಡಿನೊಳೆಗೆ ನನ್ನ ಮಗಳು ಬರಲು ಸಾಧ್ಯವಿಲ್ಲ. ಪ್ರಕರಣದ ಹಿಂದೆ ಕೆಲವು ಕಾಣದ ಕೈಗಳಿರುವಂತೆ ಬಾಸವಾಗುತ್ತಿದೆ
-ನಾರಾಯಣ ಪೂಜಾರಿ, ಮೃತ ಪ್ರೇಮಾಳ ತಂದೆ

* ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಹಾಗೂ ಚಿನ್ನಕ್ಕಾಗಿಯೇ ಕಾಡಿಗೆ ಕರೆತಂದು ಹತ್ಯೆ ಮಾಡಿರುವುದು ಸ್ಪಷ್ಟವಾಗಿದೆ . ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದ್ದು ಇತರ ಯಾರನ್ನು ಬಂದಿಸಿಲ್ಲ.
-ಯಶೋಧ. ಎಸ್‌. ಒಂಟಿಗೋಡಿ, ಡಿ.ವೈ.ಎಸ್‌.ಪಿ

* ಗ್ರಾಮೀಣ ಭಾಗದಲ್ಲಿ ಇಂತಹ ಘಟನೆ ನಡೆದಿರುವುದು ಆಘಾತಕಾರಿಯಾಗಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಈ ಬಗ್ಗೆ ಪೊಲೀಸ್‌ ವರಿಷ್ಟಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. 
- ಕೆ. ಗೋಪಾಲ ಪೂಜಾರಿ, ಬೈಂದೂರು ಶಾಸಕ

       ಘಟನಾ ಸ್ಥಳದಲ್ಲಿ ವೃತ್ತ ನಿರೀಕ್ಷಕ ಅರುಣ ಬಿ.ನಾಯಕ್‌, ಠಾಣಾಧಿಕಾರಿ ಸೀತಾರಾಮ, ವೈದ್ಯಾಧಿಕಾರಿಗಳಾದ ಹನಿಲ್‌ ಡಿಸೋಜಾ, ಪ್ರಶಾಂತ ಭಾಗವತ್‌, ಉತ್ತಮ ಕುಮಾರ್‌, ಹಾಗೂ ಇತರ ಪೊಲೀಸ್‌ ಅಧಿಕಾರಿಗಳು ಮತ್ತು ಪ್ರಮುಖರು ಹಾಜರಿದ್ದರು. ತನಿಖೆಯಲ್ಲಿ ಆರಕ್ಷಕರಾದ ನಾಗೇಂದ್ರ, ಯುವರಾಜ್‌, ಮೋಹನ್‌ ಶಿರೂರು, ಮಯ್ಯಭಿ, ಸುಜೀತ್‌, ಸೂರ, ವಾಸುದೇವ ಪೂಜಾರಿ, ನಾಗರಾಜ , ಸುಬ್ಬಣ್ಣ ಭಾಗವಹಿಸಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com