ಕುಂದಾಪುರ: ಕಂಡ್ಲೂರು ಬಳಿ ಯುವಕನೋರ್ವ ಅನ್ಯಕೋಮಿನ ಯುವತಿಯ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ ಬೆದರಿಕೆ ಒಡ್ಡಲು ಯತ್ನಿಸಿದ ವಿಷಯ ತಿಳಿದ ಸ್ಥಳೀಯರು ಯುವಕನನ್ನು ಥಳಿಸಿದ್ದಾರೆ. ಗಾಯಗೊಂಡ ಯುವಕನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ
ಘಟನೆಗೆ ಸಂಬಂಧಿಸಿದಂತೆ ದೂರು- ಪ್ರತಿದೂರು ಕುಂದಾಪುರ ಠಾಣೆಯಲ್ಲಿ ದಾಖಲಾಗಿದೆ. ಗಾಯಗೊಂಡ ಯುವಕನನ್ನು ಕಂಡ್ಲೂರಿನ ನಿವಾಸಿ ದಿನೇಶ್ ಆಚಾರ್ಯ (33) ಎಂದು ಗುರುತಿಸಲಾಗಿದೆ.
ಕಂಡ್ಲೂರು ಮಸೀದಿ ಸಮೀಪದ ರಸ್ತೆಯ ಮನೆಯಲ್ಲಿ ತಾನು ಮಲಗಿದ್ದಾಗ, ರಾತ್ರಿ ಬಾಗಿಲು ಬಡಿದ ಶಬ್ದವಾಗಿದ್ದು, ತಾನು ಬಾಗಿಲು ತೆರೆದಾಗ ಯುವಕನೊಬ್ಬ ಒಳಗೆ ನುಗ್ಗಿದಾಗ ತಾನು ಕೂಗಿಕೊಂಡಾಗ ಆತ ನನ್ನ ಬಾಯಿ ಒತ್ತಿ ಹಿಡಿದು, ಕೂಗಿದರೆ ಸಾಯಿಸುವುದಾಗಿ ಹೇಳಿ ಜೀವ ಬೆದರಿಕೆ ಒಡ್ಡಿದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.ಇದಕ್ಕೆ ಪ್ರತಿಯಾಗಿ ದೂರು ನೀಡಿರುವ ದಿನೇಶ್ ಆಚಾರ್ಯ ಕುಂದಾಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಕಂಡ್ಲೂರಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸ್ಥಳೀಯ ಯುವಕರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾನೆ.
ಘಟನೆ ನಡೆಯುತ್ತಿದ್ದಂತೆ ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿ, ಪರೀಶಿಲನೆ ನಡೆಸಿದರು.
ಘಟನೆ ನಡೆದ ಸ್ಥಳ ಅತೀ ಸೂಕ್ಷ್ಮ ಪ್ರದೇಶವಾದ ಕಾರಣ ಸ್ಥಳದಲ್ಲಿ ಎರಡು ಕೆ.ಎಸ್.ಆರ್.ಪಿ. ತುಕಡಿಗಳನ್ನು ನಿಯೋಜಿಸಲಾಗಿದೆ. ಕುಂದಾಪುರ ಡಿವೈಎಸ್ಪಿ ಯಶೋಧಾ ಎಸ್. ಒಂಟಗೋಡಿ, ಬೈಂದೂರು ವೃತ್ತನಿರೀಕ್ಷಕ ಅರುಣ ಬಿ.ನಾಯಕ್, ಕುಂದಾಪುರ ಉಪನಿರೀಕ್ಷಕ ಜಯರಾಮ ಡಿ.ಗೌಡ ಮೊದಲಾದವರು ಸ್ಥಳಕ್ಕೆ ಆಗಮಿಸಿದರು. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಪಟ್ಟಿ ಮಾಡಿದ ಆರು ಜನರಲ್ಲಿ ಐವರನ್ನು ವಶಕ್ಕೆ ತೆಗೆದುಕೊಂಡಿದ್ದು ಅವರನ್ನು ಉಬೈದುರಾ, ರಫಿಕ್, ಜಫ್ರಿ, ಮುಜಾಹಿನ್, ಕರ್ಣಿಸಾಹಿದ್ ಎಂದು ಗುರುತಿಸಲಾಗಿದೆ.