ಸಾಸ್ತಾನ: ಬಹುಕಾಲದ ಬೇಡಿಕೆಯಾಗಿದ್ದ ಸಾಸ್ತಾನ ಸಮೀಪದ ಕೋಡಿಕನ್ಯಾಣ ಜೆಟ್ಟಿ ಕಾಮಗಾರಿ ಬಹುತೇಕ ಮುಗಿದಿದ್ದು, ಮೇ ಅಂತ್ಯದೊಳಗೆ ಉದ್ಘಾಟನೆಗೆ ಸಿದ್ಧವಾಗಲಿದೆ. ಕೋಡಿಕನ್ಯಾಣದಲ್ಲಿ ಜೆಟ್ಟಿ ನಿರ್ಮಿಸಬೇಕೆಂಬ ಮೀನುಗಾರರ ಸುದೀರ್ಘ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಇಲ್ಲಿ ಜೆಟ್ಟಿ ನಿರ್ಮಾಣದಿಂದ ಸುಮಾರು 5 ಸಾವಿರಕ್ಕೂ ಅಧಿಕ ಮೀನುಗಾರರು ಬೋಟ್ ನಿಲುಗಡೆ ಸಮಸ್ಯೆಯಿಂದ ಮುಕ್ತರಾಗಿದ್ದಾರೆ.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಶಾಸಕ ಹಾಗೂ ಹಾಲಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಕೋಡಿ ಕನ್ಯಾಣದಲ್ಲಿ ಜೆಟ್ಟಿ ನಿರ್ಮಿಸುವ ಕುರಿತು ಸಾಕಷ್ಟು ಯತ್ನಿಸಿದ್ದರು. ಹೀಗಾಗಿ 3 ಕೋಟಿ ರೂ. ವೆಚ್ಚದಲ್ಲಿ ಜೆಟ್ಟಿ ಕಾಮಗಾರಿ ಭರದಿಂದ ಸಾಗಿ ಇದೀಗ ಅಂತಿಮ ಹಂತದಲ್ಲಿದೆ.
ಈ ಜೆಟ್ಟಿ 200 ಎಕರೆ ವಿಶಾಲ ಜಾಗ ಹೊಂದಿದ್ದು, 12ರಿಂದ 15 ಫೀಟ್ನಷ್ಟು ನೀರು ತುಂಬಿಕೊಂಡು ಟ್ರಾಲ್ಬೋಟ್, ಗಿಲ್ನೆಟ್ನಂತಹ ದೋಣಿಗಳಿಗೆ ಆಶ್ರಯ ತಾಣವಾಗಲಿದೆ. ಮಳೆಗಾಲ ಸಮೀಪಿಸುತ್ತಿರುವುದರಿಂದ ಹೆಚ್ಚಿನ ಬೋಟುಗಳು ಇಲ್ಲಿ ಆಶ್ರಯ ಪಡೆಯಲಿವೆ.

ಹೂಳು ತೆಗೆಯಬೇಕು: ಮಲ್ಪೆಯಿಂದ ಹಂಗಾರಕಟ್ಟೆಗೆ ಬಂದ ಬೋಟ್ಗಳು ಅಲ್ಲಿಂದ ಕೋಡಿ ಕನ್ಯಾಣಕ್ಕೆ ಬರುವ ಅಳಿವೆಯಲ್ಲಿ ಹೂಳು ತುಂಬಿದ್ದು, ಅದನ್ನು ತೆಗೆಯುವ ಕಾರ್ಯವಾಗಬೇಕು. ಜೆಟ್ಟಿ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು 4 ದಿನಗಳ ವರೆಗೆ ಈ ಅಳಿವೆಯಲ್ಲಿ ತುಂಬಿದ ಹೂಳನ್ನು ತೆಗೆದರೂ ಅದರಿಂದ ಬೋಟ್ಗಳು ಜೆಟ್ಟಿಗೆ ಬರುವುದು ಕಷ್ಟ ಸಾಧ್ಯವಾಗಿದೆ. ಅಳಿವೆಯಲ್ಲಿ ತುಂಬಿದ ಹೂಳನ್ನು ಪೂರ್ಣ ಪ್ರಮಾಣದಲ್ಲಿ ತೆಗೆಯುವುದರ ಮೂಲಕ ಬೋಟ್ಗಳು ಒಳಬರಲು ಮತ್ತು ಹೊರಹೋಗಲು ಅನುಕೂಲ ಕಲ್ಪಿಸಬೇಕಾಗಿದೆ.
ಮುಂದೇನಾಗಬೇಕು?: ಮೀನುಗಾರರ ಅನುಕೂಲಕ್ಕಾಗಿ ಸುಂದರ ಜೆಟ್ಟಿ ನಿರ್ಮಾಣಗೊಂಡು ಉದ್ಘಾಟನೆಯ ಹಂತದಲ್ಲಿದ್ದರೂ ಕುಡಿಯುವ ನೀರಿನ ವ್ಯವಸ್ಥೆ, ಜೆಟ್ಟಿಯ ಸುತ್ತಮುತ್ತ ವಿದ್ಯುತ್ದೀಪ ಅಳವಡಿಕೆಯಾಗಬೇಕು. ಸುಮಾರು 300ರಿಂದ 400 ಬೋಟ್ಗಳು ಈ ಜೆಟ್ಟಿಗೆ ಬರುವುದರಿಂದ ಹಾಗೂ ರಾಷ್ಟ್ರೀಯ ಹೆದ್ದಾರಿ ಹತ್ತಿರವಿರುವುದರಿಂದ ಈ ಜೆಟ್ಟಿ ಬಂದರಾಗಿ ಪರಿವರ್ತನೆಯಾಗುವ ಅವಕಾಶವಿದೆ.
ಮೀನುಗಾರರಿಗೆ ಹೆಚ್ಚು ಅನುಕೂಲ ಒದಗಿಸುವ ಶೆಡ್, ಜತೆಗೊಂದು ಡೀಸೆಲ್ ಬಂಕ್ ನಿರ್ಮಾಣಗೊಳ್ಳಬೇಕು. ಜೆಟ್ಟಿಯ ಒಳಭಾಗದಲ್ಲಿ ಮಣ್ಣನ್ನು ತುಂಬಿಸಿ ಸಮತಟ್ಟುಗೊಳಿಸಿ ಮೀನುಗಾರರ ಸುಗಮ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕು.
ಚಿತ್ರ ವರದಿ - ಚಂದ್ರಶೇಖರ್ ಬಿಜಾಡಿ
ಕುಂದಾಪ್ರ ಡಾಟ್ ಕಾಂ - editor@kundapra.com