ಉಡುಪಿ: ದೇಶದ ನಗರಕ್ಕಿಂತ ಗ್ರಾಮೀಣ ಅಂಚೆ ಕಚೇರಿಗಳಲ್ಲಿ ಅಂಚೆ ಚೀಟಿಗಳ ತೀವ್ರ ಕೊರತೆ ತಲೆದೋರಿದೆ. ಕಳೆದ ಒಂದು ತಿಂಗಳಿನಿಂದ 50 ಪೈಸೆ, 1 ರೂ. 3, 4, 5, 15, 50 ರೂ. ಮುಖಬೆಲೆಯ ಅಂಚೆ ಚೀಟಿಗಳು ಲಭ್ಯವಿಲ್ಲ. ಹೀಗಾಗಿ 5 ರೂ. ಅಂಚೆ ಚೀಟಿ ಹಚ್ಚಬೇಕಾದ ಕವರಿಗೆ 25 ಪೈಸೆಯ 20 ಅಂಚೆ ಚೀಟಿ ಹಚ್ಚುವುದು ಅನಿವಾರ್ಯವಾಗಿದೆ.
ಗ್ರಾಮೀಣರಿಗೆ ಸಮಸ್ಯೆ: 2 ರೂ., 10, 20 ರೂ. ಮುಖಬೆಲೆಯ ಅಂಚೆ ಚೀಟಿಗಳು ಲಭ್ಯವಿದ್ದರೂ ಹೆಚ್ಚು ಉಪಯೋಗಕ್ಕಿಲ್ಲ. ದೇಶದ 15,826 ನಗರ ಅಂಚೆ ಕಚೇರಿಗಳಲ್ಲಿರುವ ಫ್ರಾಂಕಿಂಗ್ ಮೆಷಿನ್(ಅಂಚೆ ಚೀಟಿ ಬದಲು ಮುದ್ರೆ) ಸೌಲಭ್ಯ 1,39,040 ಗ್ರಾಮೀಣ ಅಂಚೆ ಕಚೇರಿಗಳಲ್ಲಿಲ್ಲ. ಗ್ರಾಮೀಣ ಅಂಚೆ ಕಚೇರಿ ವ್ಯಾಪ್ತಿಯ ಜನತೆ ಒಂದು ಕವರಿಗೆ ಅಂಚೆ ಚೀಟಿ ಬೇಕಿದ್ದರೆ ನಗರಕ್ಕೆ ಬರಬೇಕು. ಕೆಲ ಅಂಗಡಿಗಳಲ್ಲಿ ಈಗ ಅಂಚೆ ಚೀಟಿ ಮಾರಾಟದ ದಂಧೆಯಿದೆ.
ಸಮಸ್ಯೆ ಯಾಕೆ?: ಸಣ್ಣ ಮತ್ತು ದೊಡ್ಡ ಮೊತ್ತದ ಅಂಚೆ ಚೀಟಿ ಕೆಲ ಅಂಚೆ ಕಚೇರಿಗಳಲ್ಲಿ ಹೆಚ್ಚಿದ್ದರೆ, ಇನ್ನು ಕೆಲ ಅಂಚೆ ಕಚೇರಿಗಳಲ್ಲಿ ಕಡಿಮೆಯಿದ್ದು ಅಸಮತೋಲನ ನಿವಾರಣೆ ಹಾಗೂ ಹಲವೆಡೆ ಉಳಿದ ಸ್ಟಾಕ್ ಖಾಲಿ ಮಾಡಲು ನಾಸಿಕ್ ಮುದ್ರಣಾಲಯದಲ್ಲಿ ಅಂಚೆ ಚೀಟಿ ಮುದ್ರಣವನ್ನು ಇತ್ತೀಚೆಗೆ ಸ್ಥಗಿತಗೊಳಿಸಲಾಗಿತ್ತು.
ಇದೀಗ ಹಂತ ಹಂತವಾಗಿ ಮುದ್ರಣವಾಗುತ್ತಿದ್ದು ಇನ್ನೆರಡು ವಾರಗಳಲ್ಲಿ ದೇಶದಾದ್ಯಂತ ಸಮಸ್ಯೆ ಬಗೆಹರಿಯಲಿದೆ. ಆದರೆ ಕೆಲ ನಗರ ಅಂಚೆ ಕಚೇರಿಗಳಲ್ಲಿ ಮಾಹಿತಿ ಕೊರತೆ, ಸಿಬ್ಬಂದಿ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ಫ್ರಾಂಕಿಂಗ್ ಮೆಶಿನ್ ಅನುಕೂಲ ಮಾತ್ರ ದೊರೆಯುತ್ತಿಲ್ಲ.
ಎಸ್.ಜಿ. ಕುರ್ಯ
ಕುಂದಾಪ್ರ ಡಾಟ್ ಕಾಂ - editor@kundapra.com