ಕುಂದಾಪುರ: ಪ್ರಕೃತಿ ಪ್ರಿಯನಾದ ನಾಗನ ಆರಾಧನೆಗಾಗಿ ಪ್ರಕೃತಿಯನ್ನು ಉಳಿಸಿಕೊಂಡು ಪ್ರಕೃತಿ ತತ್ವ ದೇವತಾರಾಧನೆ ನಡೆಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಇಂತಹ ಆರಾಧನೆಗಳ ಮೂಲಕ ಬದುಕನ್ನು ಹಸನಾಗಿಸಬಹುದಾಗಿದೆ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಅವರು ಕೋಟೇಶ್ವರದ ತೆಂಕಬೈಲು, ಕುಂಬ್ರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ 'ನಾಗಯಕ್ಷಿ' ಬನದ ಪ್ರತಿಷ್ಠಾಪನಾ ಕಾರ್ಯಕ್ರಮ ಧಾರ್ಮಿಕ ಸಭೆಯಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು.
ತಲೆಮಾರುಗಳಿಂದ ಪೂಜಿಸಿಕೊಂಡು ಹಾಗೂ ನಂಬಿಕೊಂಡು ಬಂದಿರುವ ದೈವಾನುದೇವತೆಗಳ ಆರಾಧನಾ ಕಾರ್ಯವನ್ನೂ ನಾವೆಲ್ಲರೂ ಎಂದಿಗೂ ಮರೆಯಬಾರದು. ಇದರಿಂದ ದೋಷಾದಿ ಸಮಸ್ಯೆಗಳು ಕಾಡುವುದು ಖಚಿತ. ದೈವ ಪ್ರೇರಣೆ ಸಿಗುವಂತಹ ಸಂದರ್ಭದಲ್ಲಿ ವ್ಯಕ್ತಿಗೆ ಅತೀಂದ್ರಿಯ ಶಕ್ತಿಯ ಅನುಗ್ರಹವಾಗುತ್ತದೆ. ಶಿಥಿಲಾವಸ್ಥೆಯಲ್ಲಿರುವ ಶ್ರದ್ಧಾ ಕೇಂದ್ರಗಳನ್ನು ಸುವ್ಯವಥಿತಗೊಳಿಸುವ ಮೂಲಕ ಶ್ರದ್ಧಾ ಕೇಂದ್ರಗಳಲ್ಲಿ ಎಲ್ಲರಿಗೂ ಆರಾಧಿಸಲು ಅವಕಾಶ ಮಾಡಿಕೊಡುವುದರಿಂದ ಪ್ರಕೃತಿದತ್ತ ದೈವಾರಾಧನೆ ನಡೆಸಿ ಪ್ರತಕೃತಿಯೊಳಗಿನ ಭಗವಂತನನ್ನು ಸಂತುಷ್ಟಗೊಳಿಸುವ ಉತ್ತಮ ಕಾರ್ಯ ನಡೆಯುತ್ತಿದೆ ಎಂದರು.
ಶ್ರೀ ನಾಗಯಕ್ಷಿ ಬನ ಸಮಿತಿಯ ಅಧ್ಯಕ್ಷ ಸುರೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆನೆಗುಡ್ಡೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಕುಂಬ್ರಿ ಚಿಕ್ಕಮ್ಮ ದೇವಸ್ಥಾನದ ವ್ಯವಸ್ಥಾಪನ ಸಮೀತಿ ಅಧ್ಯಕ್ಷ ಜಗನ್ನಾಥ ಹೆಬ್ಬಾರ್, ತಾಲೂಕು ಪಂಚಾಯತ್ ಸದಸ್ಯ ಮಂಜು ಬಿಲ್ಲವ, ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಶೇಖರ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ವಲಯಾಧ್ಯಕ್ಷ ಸತೀಶ, ಎಂಜಿನಿಯರ್ ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ವೇದಮೂತರ್ ಬಿ. ರಾಘವೆಂದ್ರ ವರ್ಣ ಬಡಾಕೆರೆ ಹಾಗೂ ಶ್ರೀ ರಾಮಮೂತರ್ ಹೆಬ್ಬಾರ್ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ಸ್ಥಳವಕಾಶ ನೀಡಿದವರನ್ನು, ದಾನಿಗಳನ್ನು ಶ್ರೀಗಳು ಸನ್ಮಾನಿಸಿದರು. ಕಾರ್ಯಕ್ರಮಕ್ಕೂ ಮೊದಲು ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.
ಜನಜಾಗೃತಿ ವೇದಿಕೆ ಕೋಟೇಶ್ವರ ವಲಯಾಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂಸು ಆಚಾರ್ಯ ಪ್ರಾರ್ಥಿಸಿದರು, ಗಣೇಶ ಆಚಾರ್ಯ ಕುಂಬ್ರಿ ಸ್ವಾಗತಿಸಿದರು. ಮಾಲತಿ ಸತೀಶ್ ನಿರೂಪಿಸಿದರು. ಶ್ರೀಧರ ಆಚಾರ್ಯ ಸಿಹಿನಿರ್ತೋಡ್ ವಂದಿಸಿದರು.
ಸುಧಾಕರ ವಕ್ವಾಡಿ
ಕುಂದಾಪ್ರ ಡಾಟ್ ಕಾಂ - editor@kundapra.com