ಬೈಂದೂರು: ಬುಡಕಟ್ಟು ಜನಾಂಗದ ಸಂಸ್ಕೃತಿ ಬಹಳ ಎತ್ತರದಲ್ಲಿದ್ದು ಮೂಲ ಸೊಗಡನ್ನು ಉಳಿಸಿಕೊಂಡಿದೆ. ಕೊರಗರು ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನ ತನವನ್ನು ಹೊಂದಿದ್ದರೂ ನೈತಿಕ ಬೆಂಬಲ ಇಲ್ಲದಿರುವುದು ಬೇಸರ ತಂದಿದೆ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ಧನ ಮರವಂತೆ ಅಭಿಪ್ರಾಯಪಟ್ಟರು.
ಅವರು ಬೈಂದೂರಿನ ಗಾಂಧಿ ಮೈದಾನದಲ್ಲಿ ಮಹಾತ್ಮ ಜ್ಯೋತಿಭಾ ಫುಲೆ ಕಲಾವೇದಿಕೆ ಆಯೋಜಿಸಿದ ಕೊರಗ ಸಾಂಸ್ಕೃತಿಕ ಯುವ ಉತ್ಸವ ಮತ್ತು ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತಾನಾಡುತ್ತಿದ್ದರು. ಯಾವುದೇ ಜಾತಿ ವ್ಯಕ್ತಿ ಸಮಾಜ ಸಾಮಾಜಿಕವಾಗಿ ಮುಂದುವರಿಯಬೇಕಾದರೆ ಶಿಕ್ಷಣ ಅತೀ ಅಗತ್ಯ. ಕೊರಗರು ಕೀಳರಮೆ ತೊರೆದು ಸಮಾಜದ ಅಭಿವೃಧ್ಧಿಗಾಗಿ ಸಂಘಟಿತರಾಗಬೇಕು. ಅಲ್ಲದೇ ಭವಿಷ್ಯದಲ್ಲಿ ಉನ್ನತ ಶಿಕ್ಷಣದ ಕಡೆ ಮುಖಮಾಡಬೇಕು ಎಂದು ಸಲಹೆ ನೀಡಿದರು ಸಾಂಪ್ರದಾಯಿಕ ಕಲೆ ಉಳಿಸಿ ಬೆಳೆಸಬೇಕಾದರೆ ಆತ್ಮವಿಶ್ವಾಸದೊಂದಿಗೆ ಇಂತಹ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನು ಮಾಡಬೇಕು ಎಂದರಲ್ಲದೇ 2 ದಿನಗಳ ರಾಜ್ಯಮಟ್ಟದ ಕೊರಗರ ಸಮಾವೇಶವನ್ನು ಯಶಸ್ವಿಗೊಳಿಸಿದ ಸಂಘಟಕರನ್ನು ಶ್ಲಾಘಿಸಿದರು.
ಕೊಲ್ಲೂರು ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಬಿ ಗಣೇಶ ಕಾರಂತ, ಡಾ. ಬಾಬು, ಸುಭಾಷ್ ಮಂಡೂರು, ಜಿ ಎಸ್ ಮುರ್ಡೆಶ್ವರ್, ಉದ್ಯಮಿ ಬಾಬು ಪೂಜಾರಿ ನಾವುಂದ, ಗಣೇಶ ಬಾರ್ಕೂರು, ಶೇಖರ ಮರವಂತೆ, ಪ್ರಸನ್ನ ಕುಮಾರ, ಕೆದೂರು ಗಣೇಶ ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿ ಗಣೇಶ ಸ್ವಾಗತಿಸಿ, ಕಲಾವೇದಿಕೆಯ ವೈ ಲಕ್ಷ್ಮಣ ಕೆ ಕೊರಗ ನಿರೂಪಿಸಿ ವಂದಿಸಿದರು. ನಂತರ ಕೊರಗರ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಕುಂದಾಪ್ರ ಡಾಟ್ ಕಾಂ - editor@kundapra.com