ವೈಶಾಲಿ ವಾಣಿಜ್ಯ ಸಂಕೀರ್ಣದ ಮಳಿಗೆಯಲ್ಲಿ ಬೆಂಕಿ ಅವಘಡ


ಕುಂದಾಪುರ: ಇಲ್ಲಿನ ಶಾಸ್ತ್ರೀ ವೃತ್ತದ ಮೂರು ಅಂತಸ್ತಿನ ವಾಣಿಜ್ಯ ಸಂಕೀರ್ಣ ವೈಶಾಲಿ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಬೆಳಗ್ಗೆ ಭಾರಿ ಅಗ್ನಿ ದುರಂತ ಸಂಭವಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ. ದುರಂತದಲ್ಲಿ ಒಟ್ಟು 50 ಲಕ್ಷ ರೂ. ನಷ್ಟ ಸಂಭವಿಸಿದೆ. 
       ವೈಶಾಲಿ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯಲ್ಲಿನ ಗೋದಾಮಿನಲ್ಲಿ ಬೆಳಗ್ಗೆ 8.45ರ ವೇಳೆಗೆ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಬಳಿಕ ಏಕಾಏಕಿ ಬೆಂಕಿ ಇಡೀ ಸಂಕೀರ್ಣಕ್ಕೆ ಆವರಿಸಿದೆ. ಎಂದಿನಂತೆ ಸಂಕೀರ್ಣದಲ್ಲಿನ ಮಳಿಗೆ ಮಾಲೀಕರು ಬಾಗಿಲು ತೆರೆಯಲೆಂದು ಆಗಮಿಸಿದ್ದು ಬೆಂಕಿಯ ಕೆನ್ನಾಲಿಗೆ ಚಾಚಿದ್ದರಿಂದ ಭಯಗ್ರಸ್ತರಾದರು. 

ಎರಡನೇ ಮತ್ತು ಮೂರನೇ ಮಹಡಿಯಲ್ಲಿನ ಅಂಗಡಿ ಮಾಲೀಕರು ತಮ್ಮ ಸೊತ್ತುಗಳನ್ನು ಹೊರತರುವಲ್ಲಿಯೇ ಮಗ್ನರಾಗಿದ್ದರು. ಮೂರನೇ ಮಹಡಿಯ ಗೋದಾಮಿನಲ್ಲಿದ್ದ ಪಾದುಕಾಲಯ ಚಪ್ಪಲಿ ಮಳಿಗೆಯ ಲಕ್ಷಾಂತರ ರೂ. ವೌಲ್ಯದ ಚಪ್ಪಲಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅಲ್ಲದೆ ಕೆಳಅಂತಸ್ತಿನ ವೈಶಾಲಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಸೇರಿದ ಸರಕುಗಳು ಸುಟ್ಟು ಕರಕಲಾಗಿವೆ. ಬೆಂಕಿಯ ಪ್ರಕೋಪ ಎಷ್ಟರಮಟ್ಟಿಗೆ ವ್ಯಾಪಿಸಿತ್ತೆಂದರೆ ರೋಲಿಂಗ್ ಶೆಟರ್ ಕೂಡ ಧಗಧಗನೆ ಉರಿದುಹೋಗಿತ್ತು. 

ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ಬಾಟಲಿ, ಕೆಲವು ಪ್ಲಾಸ್ಟಿಕ್ ವಸ್ತುಗಳು ಸ್ಫೋಟಗೊಂಡಿದ್ದರಿಂದ ಭಾರಿ ಸದ್ದು ಹೊರಹೊಮ್ಮಿ ನಾಗರಿಕರು ಆತಂಕಗೊಳ್ಳುವಂತಾಯಿತು. ಬೆಳಗ್ಗಿನ ಹೊತ್ತು ಗಾಳಿ ಇದ್ದುದರಿಂದ ಬೆಂಕಿ ತಕ್ಷಣ ಇಡೀ ಕಟ್ಟಡಕ್ಕೆ ವ್ಯಾಪಿಸಿದ್ದು, ಉಡುಪಿ, ಕುಂದಾಪುರ, ಭಟ್ಕಳ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. 

ಕಟ್ಟಡದ ಮೇಲ್ಭಾಗದಲ್ಲಿ ಎಡ ಮತ್ತು ಬಲ ಪಾರ್ಶ್ವದಲ್ಲಿ ಅಗ್ನಿಜ್ವಾಲೆ ಪಸರಿಸಿದ್ದು, ಅಗ್ನಿಶಾಮಕ ದಳ ನಾಗರಿಕರು ಹಾಗೂ ಪೊಲೀಸರ ನೆರವಿನಿಂದ ಸತತ ಮೂರು ಗಂಟೆಗಳ ಕಾರ್ಯಾಚರಣೆಯಲ್ಲಿ ಅಗ್ನಿ ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. 

ಘಟನೆಯಲ್ಲಿ ವಾಣಿಜ್ಯ ಸಂಕೀರ್ಣದ ಗ್ರೌಂಡ್‌ಫ್ಲೋರ್‌ನ ಅಂಗಡಿ ಮಾಲೀಕ ಸ್ಟೀವನ್ ಭಯದಿಂದ ಹೊರಬರುತ್ತಿರುವಾಗ ಎಡವಿ ಬಿದ್ದಿದ್ದು, ಗಂಭೀರ ಏಟು ತಗುಲಿದೆ. ಅಲ್ಲದೆ ಬೆಂಕಿ ನಂದಿಸಲೋಸುಗ ಜೀವದ ಹಂಗು ತೊರೆದು ಮೂರನೇ ಮಹಡಿ ಒಳಗಡೆ ನುಗ್ಗಿದ ಕುಂದಾಪುರ ಅಗ್ನಿಶಾಮಕ ಠಾಣೆ ಸಿಬ್ಬಂದಿ ಮುಳ್ಳಿಕಟ್ಟೆ ಶ್ರೀನಿವಾಸ ಪೂಜಾರಿ ಅವರಿಗೆ ಸುಟ್ಟ ಗಾಯವಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸಂಚಾರ ವ್ಯತ್ಯಯ 
     ಘಟನೆ ಹಿನ್ನೆಲೆಯಲ್ಲಿ 2 ತಾಸಿಗೂ ಹೆಚ್ಚು ಹೊತ್ತು ಸಂಚಾರ ವ್ಯತ್ಯಯ ಉಂಟಾಯಿತು. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಸಂಕೀರ್ಣ ಇದ್ದುದರಿಂದ ಘಟನಾ ಸ್ಥಳದಲ್ಲಿ ಜನಸಾಗರವೇ ಸೇರಿತ್ತು. ಇದರಿಂದ ಸತತ ಟ್ರಾಫಿಕ್ ಜಾಮ್ ಉಂಟಾಯಿತು. ಪೊಲೀಸ್ ಸಿಬ್ಬಂದಿ ಬಳಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. 

30 ಲಕ್ಷ ಮೌಲ್ಯದ ಚಪ್ಪಲಿ ಬೆಂಕಿಗಾಹುತಿ 
    ವಾಣಿಜ್ಯ ಸಂಕೀರ್ಣದ ದೊಡ್ಡ ಚಪ್ಪಲಿ ಮಳಿಗೆಯಾಗಿರುವ ಪಾದುಕಾಲಯದ ಗೋದಾಮಿನಲ್ಲಿ ಬೆಂಕಿ ಮೊದಲಿಗೆ ಕಾಣಿಸಿಕೊಂಡಿದ್ದು 40*25 ವಿಸ್ತೀರ್ಣದ ಎರಡು ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 30 ಲಕ್ಷ ರೂ. ವೌಲ್ಯದ ಚಪ್ಪಲಿ ಸುಟ್ಟು ಕರಕಲಾಗಿದೆ. ದ್ಲಿಲಿ, ಮುಂಬಯಿ, ಗುಜರಾತ್ ಮೊದಲಾದ ಕಡೆಗಳ ಮಾಲುಗಳು ಗೋದಾಮಿನಲ್ಲಿದ್ದವು. 

ಕಟ್ಟಡಕ್ಕೆ ಹಾನಿ 
     ಕಾಂಪ್ಲೆಕ್ಸ್‌ನ ಮೇಲ್ಮಹಡಿ ಹಾಗೂ ಎರಡನೇ ಮಹಡಿ ಹಾನಿಗೀಡಾಗಿದೆ. ಬೆಂಕಿಯ ಆರ್ಭಟಕ್ಕೆ ಮಹಡಿಯಲ್ಲಿನ ಗೋಡೆಗಳಲ್ಲಿ ಬಿರುಕು ಮೂಡಿದೆ. ಫಿಲ್ಲರ್‌ಗಳು ಸುಟ್ಟು ಹೋಗಿವೆ. 20 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. 

ತಪ್ಪಿದ ಭಾರಿ ಅನಾಹುತ 
      ಕುಂದಾಪುರದ ಇತಿಹಾಸದಲ್ಲಿಯೇ ದೊಡ್ಡ ಮಟ್ಟದ ಅಗ್ನಿ ದುರಂತ ಇದಾಗಿದ್ದರೂ ಪೊಲೀಸರ ಮತ್ತು ಅಗ್ನಿಶಾಮಕ ಠಾಣೆ ಸಿಬ್ಬಂದಿಗಳ ಸಮಯೋಚಿತ ಕ್ರಮದಿಂದ ಭಾರಿ ಅನಾಹುತ ತಪ್ಪಿದೆ. ಈ ಕಟ್ಟಡಕ್ಕೆ ಹೊಂದಿಕೊಂದು 4, 5 ಅಂತಸ್ತಿನ ಇತರೆ(ಹೋಟೆಲ್, ವಸತಿಗೃಹ) ಕಟ್ಟಡಗಳಿದ್ದು, ಬೆಂಕಿ ತಹಬಂದಿಗೆ ತಂದಿದ್ದರಿಂದ ದೊಡ್ಡ ದುರಂತದಿಂದ ಪಾರಾಗುವಂತಾಗಿದೆ. 

ಸತತ 4 ತಾಸು ನಡೆದ ಕಾರ್ಯಾಚರಣೆಯಲ್ಲಿ ಯಾರಿಗೂ ಅಪಾಯವಾಗದಂತೆ ಬೆಂಕಿ ತಹಬಂದಿಗೆ ತರುವಲ್ಲಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಗೆ ಕುಂದಾಪುರದಿಂದ 2, ಉಡುಪಿಯಿಂದ 1, ಭಟ್ಕಳದಿಂದ 1 ಅಗ್ನಿಶಾಮಕ ವಾಹನ, 2 ನೀರಿನ ಟ್ಯಾಂಕರ್, 1 ಕ್ರೇನ್, 1 ಜೆಸಿಬಿ ಬಳಸಿಕೊಳ್ಳಲಾಗಿತ್ತು. ಕುಂದಾಪುರದ ನಾನಾ ಸೇವಾ ಸಂಸ್ಥೆ ಯುವಕರು, ಶಾಸ್ತ್ರೀ ವೃತ್ತದ ಬಸ್ ಏಜೆಂಟರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಬೆಂಕಿ ತಡೆಗಟ್ಟುವಲ್ಲಿ ಸಹಕರಿಸಿದರು. 

ಕಾರಣ ನಿಗೂಢ 
    ಘಟನೆಗೆ ಶಾರ್ಟ್ ಸರ್ಕಿಟ್ ಕಾರಣ ಎನ್ನಲಾಗುತ್ತಿದ್ದರೂ ಗೋದಾಮು ಮಾಲೀಕರು ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡಿಲ್ಲ ಎಂದಿದ್ದಾರೆ. ಅಗ್ನಿಶಾಮಕ ಠಾಣೆಯ ಮಂಗಳೂರು ವಿಭಾಗೀಯ ಅಧಿಕಾರಿ ಶರೀಫ್ ಅವರಿಗೆ ವಿವರಣೆ ನೀಡಿದ ಚಪ್ಪಲಿ ಗೋದಾಮು ಮಾಲೀಕ ಮಹಮದ್ ಗೌಸ್, ಗೋದಾಮಿನಲ್ಲಿ ನಾವು ಕರೆಂಟ್ ಬಳಸುತ್ತಿಲ್ಲ. ಶಾರ್ಟ್‌ಸರ್ಕಿಟ್ ಆಗುವ ಸಂಭವವಿಲ್ಲ. ಘಟನೆಯ ಬಗ್ಗೆ ತನಿಖೆಯಾಗಬೇಕು ಎಂದಿದ್ದಾರೆ. ಪೊಲೀಸರಿಗೂ ಇದೇ ರೀತಿ ಮಾಹಿತಿ ನೀಡಿದ್ದಾರೆ. 

ವೃತ್ತ ನಿರೀಕ್ಷಕರಿಂದ ಮಾಹಿತಿ ಸಂಗ್ರಹ 
       ಇಲ್ಲಿನ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ಕವರಿ ಕಟ್ಟಡ ಮಾಲೀಕ ನಾಗಯ್ಯ ಶೆಟ್ಟಿ, ಮಳಿಗೆ ಮಾಲೀಕ ಮಹಮದ್ ಗೌಸ್ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ತಹಸೀಲ್ದಾರ್ ಗಾಯತ್ರಿ ನಾಯಕ ಸ್ಥಳಕ್ಕೆ ಭೇಟಿ ನೀಡಿ ಮುಂಜಗ್ರತಾ ಕ್ರಮ ತೆಗೆದುಕೊಂಡರು. 

ಅಗ್ನಿಶಾಮಕ ಠಾಣೆ ಕುಂದಾಪುರದಲ್ಲೇ ಮಾಡಿ 
     ಕಳೆದ ವರ್ಷ ಹರ್ಷ ಶೋರೂಮ್‌ನಲ್ಲಿ ಇದೇ ಮಾದರಿಯಲ್ಲಿ ಬೆಂಕಿ ಆಕಸ್ಮಿಕ ಘಟನೆ ನಡೆದಿತ್ತು. ಅಗ್ನಿಶಾಮಕ ಠಾಣೆ ಕುಂದಾಪುರ ನಗರ ಹೊರವಲಯದ ಕೋಣಿ ಗ್ರಾಮದಲ್ಲಿರುವುದರಿಂದ ಅಗ್ನಿಶಾಮಕ ಠಾಣೆಯ ವಾಹನ ಬರುವಷ್ಟರಲ್ಲಿ ಸಾಕಷ್ಟು ನಷ್ಟ ಸಂಭವಿಸುತ್ತದೆ. ನಗರ ವ್ಯಾಪ್ತಿಯಲ್ಲಿ ಠಾಣೆ ಇದ್ದರೆ ತಕ್ಷಣ ಸ್ಪಂದಿಸಲು ಸಾಧ್ಯವಾಗುತ್ತದೆ. ಈ ಘಟನೆಯಲ್ಲಿಯೂ ತಕ್ಷಣದಲ್ಲಿ ಸ್ಪಂದಿಸುವ ಕೆಲಸ ಆಗಿದ್ದರೆ ದೊಡ್ಡ ಮಟ್ಟದ ನಷ್ಟ ಸಂಭವಿಸುತ್ತಿರಲಿಲ್ಲ. ಕುಂದಾಪುರ ನಗರ ವ್ಯಾಪ್ತಿಯಲ್ಲಿಯೇ ಠಾಣೆ ಇರುವ ನಿಟ್ಟಿನಲ್ಲಿ ಸಂಬಂಧಿತರು ಕ್ರಮ ತೆಗೆದುಕೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com