ಶಾಸ್ತ್ರೀ ವೃತ್ತದ ಬಳಿ ಫ್ಲೈ ಓವರ್ ಕಾಮಗಾರಿ ಶೀಘ್ರ ಆರಂಭ

ಕುಂದಾಪುರ: ನಾನಾ ಕಾರಣಗಳಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ತಲಪಾಡಿ- ಕುಂದಾಪುರ ಚತುಷ್ಪಥ ಕಾಮಗಾರಿ ಮತ್ತೆ ಆರಂಭವಾಗಿದ್ದು, ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಫ್ಲೈ ಓವರ್ ಕಾಮಗಾರಿಗೆ ಸಂಬಂಧಿಸಿದ ಸಲಕರಣೆಗಳು ಈಗಾಗಲೇ ಬಂದು ಬಿದ್ದಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗುವ ಲಕ್ಷಣ ಗೋಚರಿಸುತ್ತಿದೆ. 
      ಕಾಮಗಾರಿ ಆರಂಭವಾಗಲು ಮೀನಮೇಷ ಎಣಿಸುತ್ತಿದ್ದಂತೆಯೇ, ಮಳೆಗಾಲ ಶುರುವಾಗಲಿದ್ದು, ಸಲಕರಣೆಗಳು ತುಕ್ಕು ಹಿಡಿಯುವ ಸಾಧ್ಯತೆ ಇದೆ. ಚತುಷ್ಪಥ ಕಾಮಗಾರಿಯಡಿ ಫ್ಲೈ ಓವರ್ ನಿರ್ಮಾಣ ಆಗಬೇಕೆಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ನಡೆದ ಹೋರಾಟ ಯಶಸ್ವಿಯಾಗಿದ್ದು, ಕಾಮಗಾರಿ ಇನ್ನೆರಡು ದಿನಗಳಲ್ಲಿ ಆರಂಭಗೊಳ್ಳುವ ಸೂಚನೆ ದೊರೆತಿದೆ. ಶಾಸ್ತ್ರೀ ವೃತ್ತದ ಇಕ್ಕೆಲಗಳ ಅಂಗಡಿ ಮುಂಗಟ್ಟು ತೆರವು ಕಾರ್ಯ ನಡೆಸಲಾಗಿದ್ದು 5 ಸ್ಪಾನ್‌ಗಳ ಫ್ಲೈಓವರ್ ನಿರ್ಮಾಣಗೊಳ್ಳಲಿದೆ. 

ತ್ವರಿತಗತಿಯಲ್ಲಿ ಕಾಮಗಾರಿ:
       ಶಾಸ್ತ್ರೀ ವೃತ್ತದಲ್ಲಿ 5 ಸ್ಪಾನ್‌ಗಳ ಫ್ಲೈ ಓವರ್ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ಸೂಚಿಸಿದ್ದು, ಇನ್ನೆರಡು ದಿನಗಳಲ್ಲಿ ಕಾಮಗಾರಿ ಆರಂಭಗೊಂಡು ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಗುತ್ತಿಗೆ ವಹಿಸಿಕೊಂಡ ಕಂಪನಿಗೆ ಕಾಮಗಾರಿ ನಿರ್ವಹಿಸಲು ತೊಡಕಾಗಿದ್ದು, ಪ್ರಸ್ತುತ ಎಲ್ಲ ಸಮಸ್ಯೆಗಳು ಬಗೆಹರಿದಿವೆ. ಕಂಪನಿಗೆ ಈಗ ಯಾವುದೇ ಸಮಸ್ಯೆ ಇಲ್ಲ. ತಕ್ಷಣ ಕಾಮಗಾರಿ ಪೂರೈಸಿಕೊಡುವ ಭರವಸೆ ನೀಡಿದ್ದಾರೆ ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ. 

ಸಂಘಟಿತ ಹೋರಾಟ:
      ಕುಂದಾಪುರದಲ್ಲಿ ಚತುಷ್ಪಥ ಕಾಮಗಾರಿಯಡಿ ಎಂಬ್ಯಾಂಕ್‌ಮೆಂಟ್ ರಚಿಸಲಾಗುತ್ತದೆ ಎಂಬ ಕಾರಣಕ್ಕೆ ಬಹಳಷ್ಟು ವಿರೋಧ ವ್ಯಕ್ತವಾಗಿತ್ತು. ಎಂಬ್ಯಾಂಕ್‌ಮೆಂಟ್ ರಚಿಸಿದ್ದಲ್ಲಿ ಕುಂದಾಪುರ ನಗರ ಪ್ರವೇಶ ನಿರ್ಬಂಧ ಆಗುತ್ತದೆ ಎಂಬ ನೆಲೆಯಲ್ಲಿ ಕುಂದಾಪುರ ಉಳಿಸಿ ಹೋರಾಟ ಸಮಿತಿ, ಕುಂದಾಪುರ ಪುರಸಭೆ, ನಾನಾ ಸಂಘಟನೆಗಳು ಹೋರಾಟ ನಡೆಸಿದ್ದರು. ಹೋರಾಟದ ನೇತೃತ್ವ ವಹಿಸಿದ್ದ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಸಂಬಂಧಿತ ಸಚಿವರು, ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಎಂಬ್ಯಾಂಕ್‌ಮೆಂಟ್ ರಚನೆ ಕೈಬಿಡುವಂತೆ ಒತ್ತಾಯಿಸಿದ್ದಲ್ಲದೆ ಫ್ಲೈಓವರ್ ನಿರ್ಮಿಸಬೇಕೆಂದು ಆಗ್ರಹಿಸಿದ್ದರು. 
      ಆಗ್ರಹಕ್ಕೆ ಮಣಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕುಂದಾಪುರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ರಾಜ್ಯಸಭೆ ಸದಸ್ಯ ಆಸ್ಕರ್ ಫರ್ನಾಂಡಿಸ್ ಸಹ ಈ ಸಂದರ್ಭ ಹಾಜರಿದ್ದರು. ಈ ನಡುವೆ ಚತುಷ್ಪಥ ಕಾಮಗಾರಿ ಹಿನ್ನಡೆ ಕಂಡುಕೊಂಡಿದ್ದರಿಂದ ನಾಗರಿಕರು ಮತ್ತೆ ಕಳವಳಕ್ಕೀಡಾಗಿದ್ದರು. ಮತ್ತೆ ಚತುಷ್ಪಥ ಕಾಮಗಾರಿ ವೇಗ ಕಂಡುಕೊಂಡಿದ್ದು, ಕುಂದಾಪುರದಲ್ಲಿ ಫ್ಲೈಓವರ್ ನಿರ್ಮಾಣ ಆಗುತ್ತಿರುವುದಕ್ಕೆ ಕುಂದಾಪುರ ಉಳಿಸಿ ಹೋರಾಟ ಸಮಿತಿ ಸಂತಸ ವ್ಯಕ್ತಪಡಿಸಿದೆ


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com