ರಂಗಭೂಮಿಯ ನಂಟು ಬದುಕನ್ನು ಕಲಿಸುತ್ತದೆ: ವಾಸುದೇವ ಗಂಗೇರ

ನಾಗೂರು: ಮನುಷ್ಯರು ಒಬ್ಬರನ್ನೊಬ್ಬರು ಪ್ರೀತಿಸುವುದನ್ನು ರಂಗಭೂಮಿಯಿಂದ ಕಲಿಯಬಹುದು. ರಂಗಭೂಮಿಯ ನಂಟು ಬದುಕನ್ನು ಕಲಿಸುತ್ತದೆ ಎಂದು ನೀನಾಸಂ ಪದವೀಧರ, ರಂಗ ನಿರ್ದೇಶಕ ವಾಸುದೇವ ಗಂಗೇರ ನುಡಿದರು.
    ರಜತ ಮಹೋತ್ಸವ ವರ್ಷಾಚರಣೆಯಲ್ಲಿರುವ ನಾಗೂರು ಸಂದೀಪನ ಆಂಗ್ಲಮಾಧ್ಯಮ ಶಾಲೆಯಲ್ಲಿ ಆರ್. ಕೆ. ಸಂಜೀವ್‌ರಾವ್ ಸ್ಮಾರಕ ದತ್ತಿನಿಧಿ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಕಾಡೆಮಿ ಮತ್ತು ರಂಗಸ್ಥಳ ಉಪ್ಪುಂದ ಇವರ ಪ್ರಾಯೋಜಕತ್ವದಲ್ಲಿ ನಡೆದ ಮಕ್ಕಳ ರಂಗತರಬೇತಿ ಶಿಬಿರದ ಸಮಾರೋಪ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರಂಗಭೂಮಿ ಜೀವಂತ ಕಲೆಯಾಗಿದ್ದು, ಪ್ರೇಕ್ಷಕ ಹಾಗೂ ನಟನ ನಡುವಿನ ಕೊಂಡಿಯಾಗಿದೆ. ಇಂತಹ ಗ್ರಾಮೀಣ ಪರಿಸರದ ಪುಟಾಣಿಗಳಳ್ಲಿರುವ ಸ್ತಬ್ಧ ಪ್ರತಿಭೆ ಹಾಗೂ ನೈತಿಕ ಮೌಲ್ಯ ತಿಳಿಸುವಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಲಿದೆ ಎಂದರು.
       ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ಮಾತನಾಡಿ, ಬಾಲ್ಯದಿಂದಲೇ ಮಕ್ಕಳಿಗೆ ಕಲೆಯ ಪರಿಚಯ ಮತ್ತು ಮಾಹಿತಿ ನೀಡಿದಾಗ ಮಕ್ಕಳ ಬುದ್ಧಿ ಪಕ್ವಗೊಂಡು ಶಾರೀರಿಕ ವ್ಯಾಯಾಮ ದೊರಕುವುದಲ್ಲದೇ, ಸಭಾಕಂಪನದಿಂದ ಮುಕ್ತರಾಗಬಹುದು ಎಂದರಲ್ಲದೇ ನಗರ ಪ್ರದೇಶಗಳಲ್ಲಿ ಸಾಂಸ್ಕೃತಿಕ ರಂಗ ಚಟುವಟಿಕೆಗಳನ್ನು ಬೇಕಾದಷ್ಟು ಕಾಣಬಹುದು. ಗ್ರಾಮೀಣ ಪರಿಸರದ ಮಕ್ಕಳಿಗೂ ಈ ಅವಕಾಶ ದೊರೆಯಬೇಕೆಂಬ ಉದ್ದೇಶದಿಂದ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸ್ವತಃ ಕಲಾವಿದರಾದ ಅಡಿಗ ತಿಳಿಸಿದರು.
      ಉಡುಪಿ ಎಂ.ಜಿ.ಎಂ. ಕಾಲೇಜಿನ ನಿವೃತ್ತ ಪ್ರೊಫೆಸರ್ ಡಾ. ಅಶೋಕ್ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಸಾಫ್ಟವೇರ್ ಇಂಜಿನಿಯರ್ ಸಂಜಿತ್‌ರಾವ್ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ರಂಗ ಕಲಾ ಶಿಕ್ಷಕ ವಾಸುದೇವ ಗಂಗೇರ ದಂಪತಿಗಳಿಗೆ ಸನ್ಮಾನಿಸಲಾಯಿತು. ರಂಗಸ್ಥಳ ಗೌರವಾಧ್ಯಕ್ಷ ರಾಜರಾಮ ಭಟ್, ಅಧ್ಯಕ್ಷ ವಿ.ಎಚ್. ನಾಯ್ಕ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಜಾರಾಮ್ ಪಡಿಯಾರ್ ವಂದಿಸಿದರು. ಸುಧಾಕರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ನಂತರ ಶಿಬಿರದ 40 ಪುಟಾಣಿಗಳಿಂದ ಹನಿಗವಿ ದುಂಡಿರಾಜ್ ರಚಿಸಿದ ಅದ್ವಾನಪುರ ನಾಟಕ ಪ್ರದರ್ಶನಗೊಂಡಿತು.
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com