ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸಿ: ಸುಕುಮಾರ್ ಶೆಟ್ಟಿ

ಕುಂದಾಪುರ: ಕಳೆದ 58 ವರ್ಷಗಳಲ್ಲಿ ಮಾಡಲಾಗದ ಅಭಿವೃದ್ಧಿ ಹಾಗೂ ಮಹತ್ತರ ಸಾಧನೆಗಳನ್ನು ರಾಜ್ಯದ ಬಿಜೆಪಿ ಸರಕಾರ ಮಾಡಿದ್ದು, ಮುಂದಿನ ದಿನಗಳಲ್ಲಿ ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ವಿಕಾಸಕ್ಕೆ ಬಿಜೆಪಿಯನ್ನು ಬೆಂಬಲಿಸಬೇಕೆಂದು ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಂ.ಸುಕುಮಾರ್ ಶೆಟ್ಟಿ ಮನವಿ ಮಾಡಿದರು.
      ಗಂಗೊಳ್ಳಿಯ ಬಾವಿಕಟ್ಟೆ ಬಳಿಯಿಂದ ಬಂದರಿನ ಪೋರ್ಟ್ ಆಫೀಸಿನವರೆಗೆ ನಡೆದ ಪಾದಯಾತ್ರೆ ಸಂದರ್ಭ ಅವರು ಮಾತನಾಡಿದರು.
    ಬೈಂದೂರು ಕ್ಷೇತ್ರದ ಅತಿ ದೊಡ್ಡ ಗ್ರಾಮ ಪಂಚಾಯತ್‌ಗಳಲ್ಲಿ ಒಂದಾಗಿರುವ ಗಂಗೊಳ್ಳಿಯಲ್ಲಿ ರಸ್ತೆಗಳ ಅಭಿವೃದ್ಧಿ, ಮೀನುಗಾರಿಕಾ ಜೆಟ್ಟಿಗಳ ನಿರ್ಮಾಣ, ಮೀನುಗಾರಿಕಾ ರಸ್ತೆಗಳ ಕಾಂಕ್ರೀಟಿಕರಣ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಉತ್ತಮ ಸಾಧನೆ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನನ್ನನ್ನು ಹರಿಸಿದರೆ ಗಂಗೊಳ್ಳಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವುದು, ಒಳಚರಂಡಿ ವ್ಯವಸ್ಥೆ, ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಸಹಿತ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಲು ಪ್ರಯತ್ನಿಸುವುದಾಗಿ ಹಾಗೂ ಮೀನುಗಾರರ ಹಿತರಕ್ಷಣೆ ಕಾಪಾಡಲು ಹಾಗೂ ಈ ಸಮುದಾಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ಭರವಸೆ ನೀಡಿದರು.
     ಶಾಸಕ ಕೆ.ಲಕ್ಷ್ಮೀನಾರಾಯಣ ಮಾತನಾಡಿ, ಕಳೆದ 20 ವರ್ಷಗಳಿಂದ ಬೈಂದೂರು ಕ್ಷೇತ್ರದ ಮತದಾರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಶಾಸಕನಾಗಿ ಐದು ವರ್ಷ ತೃಪ್ತಿಕರ ಸೇವೆ ಸಲ್ಲಿಸಿದ್ದೇನೆ. ಕ್ಷೇತ್ರದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿದ ತೃಪ್ತಿ ಇದೆ. ಗಂಗೊಳ್ಳಿ ಭಾಗದ ಮತದಾರರು ಈ ಹಿಂದಿನಿಂದಲೂ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಸೇವೆ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಸುಕುಮಾರ್ ಶೆಟ್ಟಿಯವರಿಗೆ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಿದ ಅವರು, ಬಿಜೆಪಿಯ ಕಮಲದ ಗುರುತಿಗೆ ಮತ ನೀಡಿ ಸುಕುಮಾರ್ ಶೆಟ್ಟಿಯವರನ್ನು ಆರಿಸುವಂತೆ ಕೇಳಿದರು.
    ಮುಖಂಡರುಗಳಾದ ಸುರೇಂದ್ರ ಖಾರ್ವಿ, ಚೆಂದು,  ಪೂರ್ಣಿಮಾ ಖಾರ್ವಿ, ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಾನಂದ ನಾಯ್ಕ್,  ಮಹೇಶ ಪೂಜಾರಿ, ಬಿ.ಸದಾನಂದ ಶೆಣೈ, ತ್ರಾಸಿ ಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ,  ಗಂಗೊಳ್ಳಿಯ ಬಾವಿಕಟ್ಟೆಯ ಬಳಿಯಿಂದ ಪೋರ್ಟ್ ಆಫೀಸಿನವರೆಗೆ ನಡೆದ ಪಾದಯಾತ್ರೆಯಲ್ಲಿ ಸಹಸ್ರಾರು ಮಂದಿ ಬಿಜೆಪಿ ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು, ಹಿತೈಷಿಗಳು ಭಾಗವಹಿಸಿದ್ದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com