ಸೋಲಿನ ಹೊಣೆ ಹೊತ್ತ ಕೋಟ ಶ್ರೀನಿವಾಸ ಪೂಜಾರಿ


ಕುಂದಾಪುರ: ಜಿಲ್ಲೆಯಲ್ಲಿ ಪಕ್ಷದ ಸೋಲಿಗೆ ನಾನೇ ಹೊಣೆಗಾರ ಎಂದು ಉಡುಪಿ ಜಿಲ್ಲಾ ಹಂಗಾಮಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಒಪ್ಪಿಕೊಂಡಿದ್ದಾರೆ. 
    ಜಿಲ್ಲೆಯಲ್ಲಿ ಹಿಂದೆ ವಿ.ಎಸ್. ಆಚಾರ್ಯ, ಮುತ್ಸದ್ದಿ ಎ.ಜಿ. ಕೊಡ್ಗಿ ನಮ್ಮಂದಿಗಿದ್ದರು. ಡಾ. ಆಚಾರ್ಯ ನಮ್ಮಂದಿಗಿಲ್ಲ. ಕೊಡ್ಗಿಯವರು ತಮ್ಮದೇ ಆದ ಕಾರಣಗಳಿಂದ ಚುನಾವಣೆಯಿಂದ ದೂರವೇ ಉಳಿದಿದ್ದರು. ಇದೊಂದೇ ಕಾರಣಕ್ಕೆ ಪಕ್ಷಕ್ಕೆ ಜಿಲ್ಲೆಯಲ್ಲಿ ಹಿನ್ನಡೆಯಾಗಿದೆ ಎಂಬುದರಲ್ಲಿ ಅರ್ಥವಿಲ್ಲ. ಅವರ ನೇತೃತ್ವ ಇಲ್ಲದೇ ಇರುವುದು ಬಹಳ ಕಾಡಿದೆ ಎಂದು ಹೇಳಿದರು. 

ಅಂತರಿಕ ಕಚ್ಚಾಟವೇ ಕಾರಣ:
      5 ವರ್ಷಗಳ ಕಾಲ ಜನಪ್ರಿಯ ಆಡಳಿತ ನೀಡಿಯೂ ಜನತೆಯ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿರುವುದಕ್ಕೆ ಅಂತರಿಕ ಕಚ್ಚಾಟವೇ ಕಾರಣ. ಅಂತರಿಕ ವಿದ್ಯಮಾನಗಳು ಅಭಿವೃದ್ಧಿ ಕಾರ್ಯಗಳನ್ನು ಗೌಣವಾಗಿಸಿದವು. ಮತದಾರರು ಅಭಿವೃದ್ಧಿಯ ಕಡೆಗೆ ಗಮನ ಕೊಡ್ತಾರೆ ಅಂತ ಭಾವಿಸಿಕೊಂಡಿದ್ದು ನಮ್ಮ ಸಣ್ಣತನ. ಕರಾವಳಿಯಲ್ಲಿ ವ್ಯವಸ್ಥಿತ ಸಂಘಟನೆ ಮಾಡಿಯೂ ಮತದಾರರನ್ನು ಓಲೈಸಿಕೊಳ್ಳಲು ವಿಫಲರಾಗಿದ್ದೇವೆ. ಕಾಂಗ್ರೆಸ್ ಪಕ್ಷ ನಿರಂತರ ಚುನಾವಣೆಗಾಗಿ ಸಿದ್ಧತೆ ಮಾಡಿಕೊಂಡು ಬಂದಿತ್ತು. ಉಡುಪಿ ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಕೊನೆಯ ಗಳಿಗೆಯಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ್ದು, ಕೆಲವು ನಿರ್ಧಾರ ತೆಗೆದುಕೊಳ್ಳುವಲ್ಲಿನ ವಿಳಂಬ ಸೋಲಿಗೆ ಕಾರಣ. ಆಡಳಿತ ಮತ್ತು ಅಭಿವೃದ್ಧಿಯಿಂದಲೇ ಮತ ಬರುತ್ತೆ ಅಂತ ತಿಳಿದುಕೊಂಡಿದ್ದು ಫಲಿತಾಂಶದ ಎಡವಟ್ಟಿಗೆ ಕಾರಣ ಎಂದು ವಿಶ್ಲೇಷಿಸಿದರು. 

ತೀರ್ಪಿಗೆ ತಲೆಬಾಗುವೆವು:
      ಕಾಪು ಮತ್ತು ಕಾರ್ಕಳ ಕ್ಷೇತ್ರದ ಒಟ್ಟು ಜನಾಭಿಪ್ರಾಯ ಒಂದು ರೀತಿಯಾದರೆ ಉಡುಪಿ, ಕುಂದಾಪುರ, ಬೈಂದೂರು ಕ್ಷೇತ್ರದ ಮತದಾರರ ಮನಸ್ಥಿತಿ ಭಿನ್ನವಾಗಿತ್ತು. ಬೈಂದೂರು, ಉಡುಪಿ, ಕುಂದಾಪುರದಲ್ಲಿ ಅಭ್ಯರ್ಥಿಗಳನ್ನು ಕೊನೆಗಳಿಗೆಯಲ್ಲಿ ಪ್ರಕಟಿಸಿದ್ದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆ ಕೊಟ್ಟ ತೀರ್ಪಿಗೆ ತಲೆಬಾಗುತ್ತೇವೆ. ಚುನಾವಣೆ ಏರುಪೇರು ಸಹಜವಾಗಿ ಇರುವಂಥದ್ದೇ. ಇದು ಪಕ್ಷದ ಕಾರ್ಯಕರ್ತರ ಆತ್ಮಸ್ಥೆರ್ಯ ಹುದುಗಿಸಬಾರದು. ಹಾಗಾಗಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಯೋಜನಾಬದ್ಧವಾಗಿ ಕೆಲಸ ಮಾಡಲಿದ್ದೇವೆ ಎಂದರು. 

ಕೆಜೆಪಿಯಿಂದ ಹಾನಿ:
       ರಾಜ್ಯದ 32 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವನ್ನು ಕೆಜೆಪಿ ಕಸಿದಿದೆ. ಕರಾವಳಿ ಜಿಲ್ಲೆಯಲ್ಲಿ ಕೆಜೆಪಿ ಪರಿಣಾಮ ಇಲ್ಲ. ರಾಜ್ಯದಲ್ಲಿ ಒಟ್ಟಾರೆ ಪಕ್ಷದ ಮತ ಗಳಿಕೆ ಸಂಖ್ಯೆ ಇಳಿಮುಖವಾಗಿದ್ದರೂ ಕರಾವಳಿಯಲ್ಲಿ ಮತ ಗಳಿಕೆ ಪ್ರಮಾಣ ಹಾಗೆಯೇ ಉಳಿದುಕೊಂಡಿದೆ. ಶೇ.2 ಮತ ನಮಗೆ ಕಡಿಮೆಯಾಗಿದೆ. ಸೋಲು, ಗೆಲುವು ಇರುವಂತಹದ್ದೇ. ಅದರ ಅವಲೋಕನದಲ್ಲೇ ಕಾಲಕಳೆಯುವ ಪರಿಸ್ಥಿತಿಯಲ್ಲಿಲ್ಲ. ಜಿಲ್ಲೆಯಲ್ಲಿ ಬಿಜೆಪಿಗೆ ಸುಭದ್ರ ನೆಲೆಗಟ್ಟಿದೆ. ಪಕ್ಷದ ಮೂಲ ಕಾರ್ಯಕರ್ತರು, ಮತದಾರರ ಆಶೀರ್ವಾದದಿಂದ ಮತ್ತೆ ಎದ್ದು ಬರಲಿದ್ದೇವೆ. ಅದಕ್ಕಾಗಿನ ವ್ಯವಸ್ಥಿತ ಸಂಘಟನೆ ಈಗಿಂದೀಗಲೆ ಆರಂಭಿಸಲಿದ್ದೇವೆ ಎಂದರು. 

ದೇವರಿಗೆ ಓಟಿಲ್ಲ!:
    ರಾಜ್ಯದ 475 ದೇವಾಲಯಗಳಿಗೆ 26 ಕೋಟಿ ರೂ. ಅನುದಾನವನ್ನು ಅತಿ ಕಡಿಮೆ ಅವಧಿಯಲ್ಲಿ ನೀಡಿದವರು. ದೇವಾಲಯದ ತಸ್ತೀಕು ವಾರ್ಷಿಕ 24 ಸಾವಿರಕ್ಕೆ ಏರಿಸಿದ್ದೀರಿ. ಹಾಗಿದ್ದೂ ಕರಾವಳಿ ಜಿಲ್ಲೆಯಲ್ಲಿ ವರ್ಕ್‌ಔಟ್ ಆಗಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಾಮಿ ದೇವರಿಗೆ ಓಟಿಲ್ಲವಲ್ಲ...ಎಂದು ಮುಗುಳ್ನಕ್ಕರು. 

ಸಿದ್ದರಾಮಯ್ಯ ಅರ್ಹ ವ್ಯಕ್ತಿ:
       ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಚುನಾಯಿತರಾಗಿದ್ದಾರೆ. ಅವರು ಸಿಎಂ ಹುದ್ದೆಗೆ ಸೂಕ್ತ ವ್ಯಕ್ತಿ. ಹಿಂದುಳಿದ ಸಮಾಜದಲ್ಲಿ ಹುಟ್ಟಿ ಹೋರಾಟದ ಹಾದಿಯ ಮೂಲಕ ಉನ್ನತ ಸ್ಥಾನಕ್ಕೆ ಏರಿದ ನಿಷ್ಕಳಂಕ ವ್ಯಕ್ತಿ. ಅವರ ಆಡಳಿತದ ನಿರೀಕ್ಷೆಯಲ್ಲಿ ನಾವಿದ್ದೇವೆ. ಬಿಜೆಪಿ ವಿರೋಧ ಪಕ್ಷದ ನಾಯಕನನ್ನಾಗಿ ಸುರೇಶ್‌ಕುಮಾರ್ ಅವರನ್ನು ನಿಯುಕ್ತಿಗೊಳಿಸಿದೆ. ರಾಜ್ಯದ ಹಿತದೃಷ್ಟಿಯಿಂದ ನಾವು ಕೆಲಸ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com