ಕುಂದಾಪುರ: ಇಂದು ಭ್ರಷ್ಠಾಚಾರ ಮತ್ತು ಅಪ್ರಾಮಾಣಿಕತೆ ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿದೆ. ಶೈಕ್ಷಣಿಕ ಅಭಿವೃಧ್ದಿ ಎಂದು ಸರ್ಕಾರ ಶಾಲೆಗಳಿಗೆ ಪೀಠೋಪಕರಣ ನೀಡುತ್ತದೆ. ಆರೇ ತಿಂಗಳಲ್ಲಿ ಅವು ಹಾಳಾಗುತ್ತವೆ. ಶಾಲೆಗೆ ಬಣ್ಣ ಬಳಿಯುವವರು ಒಂದೇ ದಿನ ಬಣ್ಣ ಬಳಿದರೂ ಪೂರ್ಣ ಬಿಲ್ ಪಾಸಾಗ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನಗಳಲ್ಲಿ ಇಂತಹ “ಜಾದೂ” ನಡೆಯುತ್ತಿರಲಿಲ್ಲ. ಇಂದು ಸ್ವಾತಂತ್ರ್ಯದ ತಪ್ಪು ವ್ಯಾಖ್ಯೆ ಮತ್ತು ದುರುಪಯೋಗ ನಡೆಸಲಾಗುತ್ತಿದೆ. ಎಂದು ಕುಂದಾಪುರದ ಹಿರಿಯ ಉದ್ಯಮಿ, ಸಮಾಜ ಸೇವಾಸಕ್ತ ಸೊಲಮನ್ ಸೋನ್ಸ್ ಹೇಳಿದರು.
ಉಡುಪಿ ಜಿಲ್ಲಾ ಕ.ಸಾ.ಪ. ಸಹಯೋಗದೊಂದಿಗೆ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೋನ್ಸ್ ರ ನಿವಾಸದಲ್ಲಿ ಹಮ್ಮಿಕೊಂಡ ‘ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉತ್ತಮ ಕ್ರೀಡಾಪಟುವೂ ಆದ ಅವರು ಇಂದಿನ ಯುವ ಜನಾಂಗ ಇಂಟರ್ನೆಟ್ ಲೋಕದಲ್ಲಿ ಲೀನವಾಗಿರುವುದನ್ನು ಆಕ್ಷೇಪಿಸಿದರು. ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಮಾತ್ರವಲ್ಲ ಎಂಬುದನ್ನು ತಿಳಿಸಿದರು.
ತಮ್ಮ ಬಾಲ್ಯ, ಶಾಲಾ ದಿನಗಳು, ವೃತ್ತಿ ಜೀವನ ಎಲ್ಲಾ ವಿಷಯಗಳ ಬಗ್ಗೆ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ಸೋನ್ಸ್, ಕುಂದಾಪುರದಲ್ಲಿ ಸ್ವಾತಂತ್ರ್ಯ ಹೋರಾಟ, ತಾನು ಏಳನೇ ತರಗತಿಯಲ್ಲಿದ್ದಾಗ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಕ್ಷಣ ಲಾರಿ ಹತ್ತಿ ಕೂಗುತ್ತಾ ಸ್ನೇಹಿತರೊಡನೆ ವಿಜಯೋತ್ಸವ ಆಚರಿಸಿದ್ದು, ಕುಂದಾಪುರದಲ್ಲಿ ನೆಹರು ಸ್ಪೋಟ್ರ್ಸ್ ಪೆವಿಲಿಯನ್ ಕಟ್ಟಡ ನಿರ್ಮಿಸಿದ್ದು, ತಮಗೆ ಕಲಿಸಿದ ಗುರುಗಳು ಎಲ್ಲವನ್ನೂ ಸ್ಮರಿಸಿಕೊಂಡು ಖುಷಿಪಟ್ಟರು.
ಸಂವಾದದಲ್ಲಿ ಪಾಲ್ಗೊಂಡ ಸೋನ್ಸ್ರವರ ಧರ್ಮಪತ್ನಿ ರತ್ನಮಾಲಾ ತಮ್ಮ ಸುಧೀರ್ಘ ಸುಮಧುರ ದಾಂಪತ್ಯ ಜೀವನವನ್ನು ಸ್ಮರಿಸಿಕೊಂಡು ಪುಲಕಿತರಾದರು. ಕ್ರೀಡಾಪ್ರೇಮಿಯಾದ ಪತಿ ಮಕ್ಕಳಿಗೆ ಆಟ ಆಡಲು ಪ್ರೋತ್ಸಾಹಿಸಿದರೆ ತಾನು ಓದಲು ಒತ್ತಾಯಿಸುತ್ತಿದ್ದೆ. ಈ ಒಂದೇ ವಿಷಯದಲ್ಲಿ ತಮ್ಮೊಳಗೆ ಪ್ರೇಮಕಲಹ ನಡೆಯುತ್ತಿತ್ತು ಎಂದು ಹೇಳಿದರು.
ಸೊ¯ಮನ್ ಸೋನ್ಸ್ ದಂಪತಿಯನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಕೆ.ಜಿ.ವೈದ್ಯ ಸ್ವಾಗತಿಸಿ, ಸನ್ಮಾನ ಪತ್ರ ವಾಚಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಸ್ತಾವನೆಗೈದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ನಾಗರಿಕರಾದ ಆರ್ಡಿ ನಾರಾಯಣ ಶೆಣೈ, ಅನಂತಕೃಷ್ಣ ಕೊಡ್ಗಿ, ಬಿ.ಆರ್. ರಾಯರ ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ ಟೀಚರ್, ಪತ್ರಕರ್ತ ಬರ್ನಾರ್ಡ್ಡಿ’ ಕೋಸ್ತಾ, ನಾರಾಯಣ ಕುಂದಾಪುರ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು. ಸೋನ್ಸ್ರವರ ಪುತ್ರ ವಿಶ್ವಾಸ್ ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದರು,.ನಾರಾಯಣ ಕುಂದಾಪುರ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com