ಕುಂದಾಪುರ: ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಾಲಯ ಬಹಳ ಪ್ರಾಚೀನವಾದುದು. ದೇಗುಲದ ಅಭಿವೃದ್ಧಿ ಕಂಡು ಮನಸ್ಸಿಗೆ ಬಹಳ ಸಂತೋಷವಾಗಿದೆ. ಪ್ರಾಚೀನತೆ ಉಳಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಮಹತೋಭಾರ ಮಹಾಲಿಂಗೇಶ್ವರ ಗಂಭೀರವಾದ ಹೆಸರು. ಇದರ ಗಾಂಭೀರ್ಯತೆ ಉಳಿಸುವಿಕೆ ಸದ್ಭಕ್ತರ ಕರ್ತವ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಪುತ್ತೂರು ಮಹಾಲಿಂಗೇಶ್ವರ ಮತ್ತು ಬಸ್ರೂರು ಮಹಾಲಿಂಗೇಶ್ವರ ದೇಗುಲದಲ್ಲಿ ಏಕಕಾಲಕ್ಕೆ ನಡೆಯುತ್ತಿರುವ ಬ್ರಹ್ಮಕಲಶ ಭುವನ ಭಾಗ್ಯ ಎಂದು ಭಾವಿಸಬೇಕು. ನಮ್ಮ ಮನೆ ಚೆಂದವಾಗಿರಬೇಕು ಎಂದು ಹೇಗೆ ಭಾವಿಸಿ ಏನೆಲ್ಲ ಶ್ರಮ ವಹಿಸುತ್ತೇವೆಯೋ ಅದೇ ರೀತಿ ಊರಿನ ದೇಗುಲ ಚೆಂದವಾಗಿರಬೇಕೆಂದು ಶ್ರಮಿಸಿದಾಗ ಭವ್ಯ ದೇಗುಲ ನೋಡಬಹುದು. ವಿಟ್ಲದಲ್ಲಿ 3 ಅಂತಸ್ತಿನ ದೇಗುಲ ನಿರ್ಮಾಣ ಭಕ್ತರ ಭಕ್ತಿಯ ಪರಾಕಾಷ್ಠತೆ ಮತ್ತು ಪ್ರೀತಿಯೇ ಕಾರಣ ಎಂದು ಉಲ್ಲೇಖಿಸಿ ದ ಅವರು, ಮನೆಗಿಂತ ಊರಿಗೊಂದು ಸುಂದರ ದೇಗುಲ ಇರಬೇಕು ಎಂದು ಹೇಳಿದರು.
ಭಾರತ ಬಡ ದೇಶವಲ್ಲ: ಚಿಕ್ಕವರಿದ್ದಾಗ ಭಾರತ ಬಡ ದೇಶ ಎಂದು ವ್ಯಾಪಕವಾಗಿ ಕರೆಯಲಾಗುತ್ತಿತ್ತು. ಆದರೆ ಈಗ ಭಾರತ ಬಡ ದೇಶವಲ್ಲ. ಬಡತನ ಕಡಿಮೆಯಾಗಿದೆ. ಆರ್ಥಿಕ, ಸಾಮಾಜಿಕ ಬದಲಾವಣೆಯೊಂದಿಗೆ ಜೀವನ ಶೈಲಿಯ ಬದಲಾವಣೆಯಾಗಿದೆ. ಬಡತನ ಶಾಶ್ವತವಲ್ಲ, ಸಂಪತ್ತು ಶಾಶ್ವತ ಎಂಬುದನ್ನು ಮನಗಾಣಲೇ ಬೇಕು. ವಿದೇಶದಲ್ಲಿ ಹಣ ಸಿಕ್ಕಿದಾಗ ಮೋಜಿಗಾಗಿ ವ್ಯಯಿಸುತ್ತಾರೆ. ಆದರೆ ಗಳಿಸಿದ ಸಂಪತ್ತಿನ ಮೊದಲ ಭಾಗ ಭಗವಂತನಿಗೆ ಅರ್ಪಿಸುವ ಮನೋಭಾವ ಈಗಲೂ ಇದೆ. ಇನ್ನೊಬ್ಬರಿಗೆ ನೀಡುವಿಕೆಯಿಂದ ಪಡುವ ಸಂತೋಷವೇ ನಿಜವಾದ ಧಾರ್ಮಿಕತೆ ಎಂದರು.
144 ಕೋಟಿ ಸಾಲ ನೀಡುವಿಕೆ: ಭಟ್ಕಳ, ಕುಂದಾಪುರ ಭಾಗದವರು ಕ್ಷೇತ್ರದ ಮೂಲ ಭಕ್ತರು. ಶ್ರೀಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆ ಈ ಭಾಗದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ನೆರವಾಗಿದೆ. ರಾಜ್ಯದ 21 ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗಿದೆ. 2012ರ ವರ್ಷಾಂತ್ಯದಲ್ಲಿ 25 ಲಕ್ಷ ಸದಸ್ಯರನ್ನು ಹೊಂದಿರುವ ಯೋಜನೆ 2400 ಕೋಟಿ ಸಾಲ ನೀಡಿದೆ. ಕುಂದಾಪುರ ವಲಯದಲ್ಲಿ 144 ಕೋಟಿ ಸಾಲ ನೀಡಲಾಗಿದ್ದು, ಶೇ.100 ವಸೂಲಾತಿಯಾಗಿದೆ ಎಂದು ವಿವರಣೆ ನೀಡಿದ ಅವರು, ಧರ್ಮ ಇದ್ದಲ್ಲಿ ಸಂಪತ್ತು ಇರುತ್ತದೆ. ಧರ್ಮ, ಅರ್ಥ, ಆಸೆಯ ಉದ್ದೀಪನಕ್ಕೆ ದೇವಾಲಯ ಬೇಕು ಎಂದರು.
ಮುಂಬಯಿ ಉದ್ಯಮಿ ಸುರೇಶ್ ಡಿ. ಪಡುಕೋಣೆ ಮಾತನಾಡಿ, ನವೀಕೃತ ಬಸ್ರೂರು ದೇಗುಲ ನೇಪಾಳದ ಪಶುಪತಿನಾಥ ಮಂದಿರವನ್ನು ಹೋಲುತ್ತಿದೆ. ಇದು ಬಸ್ರೂರು ಭಕ್ತರ ಭಾಗ್ಯ ಎಂದು ಬಣ್ಣಿಸಿದರು.
ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಉದ್ಯಮಿ ವಿ.ಕೆ. ಮೋಹನ್, ಸೇವಾಕರ್ತರಾದ ಎಂ.ವಿ. ಬಂಗೇರ, ವಿನಯಾ ಮುರುಳೀಧರ್, ಗಣೇಶ್ ಪಡಿಯಾರ್, ಹರೀಶ್ ಪಡಿಯಾರ್ ಸಹೋದರರು ಉಪಸ್ಥಿತರಿದ್ದರು. ಇದೇ ಸಂದರ್ಭ ದಾನಿಗಳನ್ನು ಸನ್ಮಾನಿಸಲಾಯಿತು.
ಗ್ರಾಮಾಭಿವೃದ್ಧಿ ಯೋಜನೆಯ ಬಸ್ರೂರು ಒಕ್ಕೂಟ ದೇಗುಲ ನವ ನಿರ್ಮಾಣಕ್ಕೆ 1.20 ಲಕ್ಷ ರೂ. ದೇಣಿಗೆ ನೀಡಿತು. ಡಾ. ಡಿ. ವೀರೇಂದ್ರ ಹೆಗ್ಗಡೆ ಒಕ್ಕೂಟ ಸದಸ್ಯರನ್ನು ಗೌರವಿಸಿದರು. ದೇವಳದ ವತಿಯಿಂದ ಹೆಗ್ಗಡೆಯವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿಗಾರ್ ಸ್ವಾಗತಿಸಿದರು. ಅಧ್ಯಾಪಕ ದಿನಕರ ಆರ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com