ಮೊ.ದೇ ಪ.ಪೂ. ವಸತಿ ಕಾಲೇಜು ಪ್ರವೇಶಕ್ಕೆ ಅರ್ಜಿ


ಉಡುಪಿ: ನಗರದ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮದ ಪದವಿ ಪೂರ್ವ ವಸತಿ ಕಾಲೇಜಿ ನಲ್ಲಿ 2013-14ನೆ ಸಾಲಿಗೆ ಪ್ರಥಮ ಪಿಯುಸಿ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 
         ಈ ವಸತಿ ಕಾಲೇಜಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ ನೀಡುವುದರೊಂದಿಗೆ ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಸಹ ನೀಡಲಾಗುತ್ತದೆ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಯ ಪಿಸಿ‌ಎಂಬಿ ಮತ್ತು ಪಿಸಿ‌ಎಂಸಿ ಸಂಯೋಜನೆಗಳಿಗೆ ಮಾತ್ರ ತಲಾ 40 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಇದರಲ್ಲಿ ಶೇ.50 ಸೀಟುಗಳು ವಿದ್ಯಾರ್ಥಿನಿಯರಿಗೆ ಹಾಗೂ ಶೇ.50 ಸೀಟು ವಿದ್ಯಾರ್ಥಿಗಳಿಗೆ ಲಭ್ಯವಿದೆ. ಜಿಲ್ಲೆಯ ಕಾರ್ಕಳ, ಬೈಂದೂರು, ಕೋಟೇಶ್ವರ ಮತ್ತು ಬ್ರಹ್ಮಾವರದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಎಸೆಸೆಲ್ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಸೀಟುಗಳು ಖಾಲಿ ಉಳಿದಲ್ಲಿ ಬೇರೆ ಜಿಲ್ಲೆಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಎರಡನೆ ಆದ್ಯತೆ ನೀಡಲಾಗುವುದು. ಜಿಲ್ಲೆಯ ಬೇರೆ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಮೂರನೆ ಆದ್ಯತೆ ನೀಡಲಾಗುವುದು.
         ಈ ವಸತಿ ಕಾಲೇಜನ್ನು ಸೇರಬಯಸುವ ವಿದ್ಯಾರ್ಥಿಗಳು ಕಾರ್ಕಳ, ಬೈಂದೂರು, ಕೋಟೇಶ್ವರ ಮತ್ತು ಬ್ರಹ್ಮಾವರ (ಆರೂರು)ದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಅಥವಾ ಉಡುಪಿಯ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ಉಚಿತ ಅರ್ಜಿಗಳನ್ನು ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯವಿರುವ ದಾಖಲಾತಿಗಳೊಡನೆ ಜೂನ್ 10ರೊಳಗೆ ಸಲ್ಲಿಸಬಹುದಾಗಿದೆ. 
          ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಧಿಕಾರಿಗಳ ಕಚೇರಿ, ಜಿಲ್ಲಾ ಕಚೇರಿಗಳ ಸಂಕೀರ್ಣ, ರಜತಾದ್ರಿ, ಎರಡನೆ ಮಹಡಿ, ಮಣಿಪಾಲ, ಉಡುಪಿ (ದೂರವಾಣಿ ಸಂಖ್ಯೆ 0820-2574881) ಅಥವಾ ವಸತಿ ಕಾಲೇಜು ಅಂಬಾಗಿಲು (ದೂರವಾಣಿ: 0820-2581075) ಇಲ್ಲಿಂದ ಪಡೆಯಬಹುದು ಎಂದು ಉಡುಪಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com