ಆದಿಶಂಕರರು ಧರ್ಮದ್ವಯದ ಹರಿಕಾರರು: ಯು.ಸಿ. ಹೊಳ್ಳ

ಬೈಂದೂರು: ಸರ್ವ ಜನರ ಹಿತಕ್ಕಾಗಿ ಜನರ ನಂಬಿಕೆ, ನಡೆವಳಿಗೆಗಳು ಕಾಲಕಾಲಕ್ಕೆ ಸುಧಾರಣೆ ಕಾಣುತ್ತಾ ಬಂದಿವೆ. ಭಾರತದ ಮಟ್ಟಿಗೆ ಆದಿ ಶಂಕರಾಚಾರ್ಯರು ಸನಾತನ ಧರ್ಮದ ನವೀನ ವ್ಯಾಖ್ಯೆಗೆ ಮೂಲ ಪುರುಷರಾಗಿದ್ದು ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಗ್ರಂಥಗಳಿಗೆ ವ್ಯಾಖ್ಯಾನಗಳನ್ನು ಮಾಡಿ ದೇಶಾದ್ಯಂತ ಪಸರಿಸಲು ಆಮ್ನಾಯ ಮಠ ಮತ್ತು ಯತಿಪರಂಪರೆಗಳಿಗೆ ಬುನಾದಿಯಾಗಿದ್ದಾರೆ. ಭಾರತೀಯ ಷಡ್‌ದರ್ಶನಗಳು ಅದರಾಚೆಯ ಅವೈದಿಕ ಧರ್ಮಗಳ ಒಳ್ಳೆಯ ಅಂಶಗಳನ್ನು ಸಮನ್ವಯಗೊಳಿಸಿ ಪಂಚಾಯತನ ಪೂಜಾಪದ್ದತಿಯೊಂದಿಗೆ ಭಕ್ತಿ ಮತ್ತು ಜ್ಞಾನ ಮಾರ್ಗಗಳ ಸಮನ್ವಯತೆ ಸಾಧಿಸಿ ಅವತಾರ ಪುರುಷರೆನಿಸಿಕೊಂಡಿದ್ದಾರೆ ಎಂದು ಬೈಂದೂರು- ಉಪ್ಪುಂದ ಶಂಕರ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದ್ದಾರೆ.
      ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಹಮ್ಮಿಕೊಂಡ ಶ್ರೀ ಶಂಕರ ಜಯಂತಿ ಸರಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ, ಸಾರ್ವಜನಿಕ ದೇವಸ್ಥಾನಗಳಲ್ಲಿ ಧರ್ಮ ಸಂಸ್ಕೃತಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ನಿಯತವಾಗಿ ನಡೆದಲ್ಲಿ ಜನರಲ್ಲಿ ಸದ್ಭಾವನೆ - ಸದ್ಭುದ್ಧಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
         ವಿದ್ವಾನ್ ಶಂಕರನಾರಾಯಣ ಭಟ್ ಅವರು ಶಂಕರಾಚಾರ್ಯರ ಜೀವನ ಪರಿಚಯ ಕುರಿತು ಉಪನ್ಯಾಸ ನೀಡಿದರು. ದೀಟಿ ಸೀತಾರಾಮ ಮಯ್ಯ ಶುಭಾಶಂಸನೆಗೈದರು.
       ಕೇಶವ ನಾಯ್ಕ ಸ್ವಾಗತಿಸಿದರು, ಸಮಿತಿಯ ಕಾರ್ಯದರ್ಶಿ ಯು. ಸಂದೇಶ ಭಟ್ ನಿರೂಪಿಸಿ, ಯು. ಗಣೇಶ ಪ್ರಸನ್ನ ಮಯ್ಯ ವಂದಿಸಿದರು. 

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com