ಕುಂದಾಪುರ: ಹಿಂದೂ ಪರಂಪರೆ ಉಳಿಸಿ ಬೆಳೆಸಬೇಕಾದ ಅಗತ್ಯ ಇದೆ. ನಮ್ಮ ಸಂಸ್ಕೃತಿಯ ತಿರುಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬುವ ಕೆಲಸವನ್ನು ತಾಯಂದಿರು ಮಾಡಬೇಕಾಗಿದೆ. ಜೀವನಕ್ಕೆ ಸ್ಪಷ್ಟ ಗುರಿ ಹಾಗೂ ಉದ್ದೇಶ ಇದ್ದರೆ ಭಗವಂತನ ಅನುಗ್ರಹ ಸಿಗುತ್ತದೆ. ಜೀವನದಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರವಿದ್ದಲ್ಲಿ ಸಾಧನೆಯತ್ತ ಸಾಗಲು ಸಾಧ್ಯ ಎಂದು ಕೇಮಾರು ಸಾಂದೀಪಿನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದರು.
ಅವರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನವೀಕರಣಗೊಂಡ ಶಿಲಾಮಯ ದೇವಾಲಯದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.
ಬದಲಾಗುತ್ತಿರುವ ಕಾಲ ಸ್ಥಿತಿಯಲ್ಲಿ ನಮ್ಮ ಧರ್ಮ, ಸಂಸ್ಕೃತಿ ಉಳಿಸುವ ಕಾರ್ಯವನ್ನು ದೇವಾಲಯಗಳು ಮಾಡುತ್ತಿದೆ. ಭವ, ಆಧ್ಯಾತ್ಮ ಹಾಗೂ ಲೌಕಿಕ ರೋಗಗಳನ್ನು ಪರಿಹರಿಸುವ ಶಿವನ ಆರಾಧನೆ ಜೀವನದಲ್ಲಿ ನಿರಂತರವಾಗಿ ಇರಬೇಕು. ಇಂದು ಸಂಸ್ಕೃತಿಯಿಂದ ಜನರು ವಿಮುಖರಾಗುತ್ತಿದ್ದಾರೆ. ಸಂಸ್ಕೃತಿ ವಿಕೃತಿಯಾಗಿದೆ. ಇಂದು ವಿಚಿತ್ರ ಆಚರಣೆಗೆ ಮನಸೋಲುತ್ತಿರುವ ಜನರು ದೇವಸ್ಥಾನ, ದೈವಸ್ಥಾನ ಮೊದಲಾದವುಗಳ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಭಯ ಕಾಡುತ್ತಿದೆ ಎಂದರು.
ದೇವಳದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತುಮಕೂರು ಜಿಲ್ಲೆಯ ನಿರ್ದೇಶಕ ಗಂಗಾಧರ ರೈ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ಟಿ. ಪೂಜಾರಿ, ಮುಂಬಯಿ ಉದ್ಯಮಿ ಮರತ್ತೂರು ಸುರೇಶ್ ಶೆಟ್ಟಿ, ಥಾಣಾ ಜಿಲ್ಲಾ ಕನ್ನಡ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಮಣಿಪಾಲ ಪ್ರಸನ್ನಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿಪ್ರಸಾದ್ ಶೆಟ್ಟಿ ಬೆಳ್ಳಿಪ್ಪಾಡಿ, ಉದ್ಯಮಿ ಜಗದೀಶ್ ಶೆಟ್ಟಿ ಕುದ್ರುಕೋಡು ಉಪಸ್ಥಿತರಿದ್ದರು.
ಕಾರ್ಯದರ್ಶಿ ರಾಜೇಂದ್ರ ಶೆಟ್ಟಿಗಾರ್ ಸ್ವಾಗತಿಸಿದರು. ದಿನಕರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ನರಸಿಂಹ ಪೂಜಾರಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com