
ಕುಂದಾಪುರ: ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಆಚರಿಸುವುದರ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಬಂಡವಾಳಶಾಹಿಗಳ ಶೋಷಣೆಗೆ ಅಂತ್ಯ ಹಾಡಲು ಪಣತೋಡಬೇಕಾಗಿದೆ. ಬಂಡವಾಳಶಾಹಿ ಶೋಷಣೆಯ ವಿರುದ್ಧ ಕಾರ್ಮಿಕರು ಒಗ್ಗಟ್ಟಾಗಿ. ಸಂಘಟನೆಗಳ ಮೂಲಕ ಹೋರಾಟ ನಡೆಬೇಕಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ನಿತ್ಯಾನಂದ ಸ್ವಾಮಿ ಹೇಳಿದರು.
ಅವರು ಕುಂದಾಪುರದ ನೆಹರೂ ಮೈದಾನದಲ್ಲಿ ನಡೆದ ಕಾರ್ಮಿಕರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ತೆರಿಗೆ ವಂಚನೆಯ ಮೂಲಕ ವಿದೇಶಿ ವಸ್ತುಗಳು ಅತೀ ಕಡಿಮೆ ಬೆಲೆಗೆ ಭಾರತಕ್ಕೆ ಆಮದಾಗುತ್ತಿವೆ. ಭಾರತ ವಿಶ್ವ ಹಣಕಾಸು ಬಂಡವಾಳದ ದಾಳಕ್ಕೆ ಬಲಿಯಾಗಿದೆ. ಇದೆಲ್ಲದರ ಪರಿಣಾಮ ಕಾಮಿಕ ಸಂಘಟನೆಗಳು ತಮ್ಮ ಹೋರಾಟದ ಸ್ವರೂಪವನ್ನೂ ಬದಲಾಯಿಸಿಕೊಳ್ಳಬೇಕಾಗಿದ್ದು ಎಲ್ಲಾ ಕಾರ್ಮಿಕ ಸಂಘಟನೆಗಳು ಒಂದೇ ವೇದಿಕೆಯಡಿ ಬರಬೇಕಾಗಿದೆ. ಐಕ್ಯತೆಗಾಗಿ ನಡೆಯುತ್ತಿರುವ ಹೋರಾಟಗಳ ಜೊತೆಯಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಿಕೊಳ್ಳುತ್ತಲೇ ಪ್ರಭುತ್ವದ ದಾರಿಗಳನ್ನು ಹುಡುಕಿಕೊಳ್ಳಬೇಕಾಗಿದೆ. ಈ ಬಗ್ಗೆ ಕಾರ್ಮಿಕರು ಯೋಚನೆ, ಅಧ್ಯಯನಕ್ಕೆ ಸಮಯ ಕೊಡಬೇಕಾಗಿದೆ ಎಂದರು.
ಕಾಮಿಕ ಮುಖಂಡ ಹೆಚ್. ನರಸಿಂಹ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್, ಜಿಲ್ಲಾಧ್ಯಕ್ಷ ಕೆ. ಶಂಕರ್, ಕಟ್ಟಡ ಕಾರ್ಮಿಕ ಸಂಘಟನೆಯ ತಾಲೂಕು ಅಧ್ಯಕ್ಷ ಯು ದಾಸ್ ಭಂಡಾರಿ, ಸಿಐಟಿಯು ತಾಲೂಕು ಅಧ್ಯಕ್ಷ ಮಹಾಬಲ ವಡೇರ ಹೋಬಳಿ, ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷೆ ಬಲ್ಕೀಸ್ ಭಾನು, ಪಮಚಾಯಿತಿ ನೌಕರರ ಸಂಘದ ಮುಖಂಡ ವೆಂಕಟೇಶ್ ಕೋಣಿ, ಅಂಗನವಾಡಿ ಸಂಘಟನೆಯ ಅಧ್ಯಕ್ಷೆ ರತಿ ಶೆಡ್ತಿ, ಅಕ್ಷರ ದಾಸೋಹ ಸಂಘಟನೆಯ ಅಧ್ಯಕ್ಷೆ ಶಾರದಾ ಬೈಂದೂರು, ಕೃಷಿ ಕೂಲಿ ಕಾರ್ಮಿಕರ ಸಂಘದ ಧ್ಯಕ್ಷ ರಾಜೀವ ಪಡುಕೋಣೆ, ಮುಖಂಡ ವಿ ನರಸಿಂಹ ಉಪಸ್ಥಿತರಿದ್ದರು. ಡಿವೈಎಫ್ಐ ಮುಖಂಡ ಸುರೇಶ್ ಕಲ್ಲಾಗರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮಕ್ಕೂ ಮೊದಲು ಕಾರ್ಮಿಕರಿಂದ ಮೆರವಣಿಗೆ ನಡೆಯಿತು.
ಕುಂದಾಪ್ರ ಡಾಟ್ ಕಾಂ - editor@kundapra.com