ಧಾರ್ಮಿಕ ಪ್ರವಚನದಿಂದ ಮನಸ್ಸಿಗೆ ಸ್ವಸ್ಥ: ಹರಿದಾಸ ಬಿ.ಸಿ. ರಾವ್‌

ಕೋಟ: ಸಮಾಜದಲ್ಲಿ ಎಲ್ಲವೂ ವಾಣಿಜ್ಯೀಕರಣಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಮಾನವನ ಮನಸ್ಸು ಅಶಾಂತಿಯಿಂದ ತತ್ತರಿಸುತ್ತಿದೆ. ಧಾರ್ಮಿಕ ಪ್ರವಚನಗಳನ್ನು ಕೇಳಿದಾಗ ಅಂತಹ ಮನಸ್ಸು ಶಾಂತವಾಗುತ್ತದೆ; ಸನ್ಮಾರ್ಗದಲ್ಲಿ ನಡೆಯಲು ಪ್ರಚೋದನೆ ದೊರಕುತ್ತದೆ. ಹಾಗಾಗಿ ಧಾರ್ಮಿಕ ಪ್ರವಚನ ಎಂಬುದು ಮನಸ್ಸಿನ ಸ್ವಾಸ್ಥ್ಯಕ್ಕೆ ನೀಡುವ ಟಾನಿಕ್‌ ಎಂದು ಹರಿದಾಸ ಬಿ.ಸಿ. ರಾವ್‌ ಹೇಳಿದರು.
     ಸಾಲಿಗ್ರಾಮದ ಚಿತ್ರಪಾಡಿಯ ಕಾರ್ತಟ್ಟಿನಲ್ಲಿರುವ ಶ್ರೀ ಅಘೋರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ದಾರ್ಮಿಕ ಉಪನ್ಯಾಸ ನೀಡಿದರು. 
    ಇಂದು ಇಲ್ಲಿ ನಡೆದ ಅಭಿವೃದ್ಧಿ ಕೆಲಸಗಳು ಇಲ್ಲಿಯ ಜನರ ನೈತಿಕ ಮೌಲ್ಯಗಳ ಅಭಿವೃದ್ಧಿಗೆ ನಾಂದಿ ಹಾಡಿವೆ. ಸಂಪಾದನೆಯನ್ನು ಒಳ್ಳೆಯ ಕೆಲಸಗಳಿಗಾಗಿ ಕಳೆದುಕೊಂಡಾಗ ಜೀವನ ಸಾರ್ಥಕವಾಗುತ್ತದೆ. ಧಾರ್ಮಿಕ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಸಮಯ ಕಳೆದುಕೊಂಡಾಗ ಮನಸ್ಸಿಗೆ ಶಾಂತಿ ಲಭಿಸುತ್ತದೆ ಎಂದು ಅವರು ಹೇಳಿದರು.
     ಇದೇ ಸಂದರ್ಭ ಶ್ರೀ ಅಘೋರೇಶ್ವರ ಸಾಂಸ್ಕೃತಿಕ ಕಲಾಮಂದಿರ ಉದ್ಘಾಟಿಸಿ ಮಾತನಾಡಿದ ಧರ್ಮದರ್ಶಿ ಆನಂದ ಸಿ. ಕುಂದರ್‌, 12 ವರ್ಷಗಳ ಹಿಂದೆ ಈ ದೇವಾಲಯ ಜೀರ್ಣೋದ್ಧಾರಗೊಂಡ ಆ ದಿನಕ್ಕೂ ಇಂದಿಗೂ ಅಜಗಜಾಂತರ ವ್ಯತ್ಯಾಸ ಇದೆ. ಇಂದು ಅಭೂತಪೂರ್ವ ಬದಲಾವಣೆ ಆಗಿದೆ. ಇದಕ್ಕೆ ಕಾರಣೀಭೂತರಾದವರು ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕಾರಂತರು ಹಾಗೂ ಸದಸ್ಯರು ಎಂದರು.
      ಶ್ರೀ ಅಘೋರೇಶ್ವರ ಕಲಾರಂಗದ ಕಚೇರಿ ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿದ ಚಂದ್ರಶೇಖರ ಕಾರಂತ ಮಾತನಾಡಿ, ಆರೂಢ ಪ್ರಶ್ನೆಯಲ್ಲಿ ಕಂಡುಬಂದಂತೆ ನಾಗಪರಿವಾರ ಪ್ರತಿಷ್ಠೆ, ಕೆರೆಯ ನವೀಕರಣ, ಜೀರ್ಣಾಷ್ಠಬಂಧ ಬ್ರಹ್ಮಕಲಶೋತ್ಸವ ನೆರವೇರಿಸಲಾಗಿದೆ. ಸುಮಾರು 22 ಲಕ್ಷ j ರೂ. ವೆಚ್ಚದಲ್ಲಿ ಕೆರೆಯ ನವೀಕರಣ ಮತ್ತು ಸಾಂಸ್ಕೃತಿಕ ಕಲಾಮಂದಿರ ನಿರ್ಮಿಸಲಾಗಿದೆ. ಆಡಳಿತ ಮಂಡಳಿ, ಸ್ವಾಗತ ಸಮಿತಿ ಹಾಗೂ ಊರ-ಪರವೂರ ಭಕ್ತಾಭಿಮಾನಿಗಳಾದ ದಾನಿಗಳಿಂದ ಇದು ಸಾಧ್ಯವಾಗಿದೆ ಎಂದರು.
      ಸರ್ವ ಶ್ರೀ ಅಚ್ಯುತ ಪೂಜಾರಿ, ರಂಗಪ್ಪಯ್ಯ ಹೊಳ್ಳ, ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ದೇವಾಲಯದ ಅಭಿವೃದ್ಧಿ ಕಾರ್ಯದ ಕಾಮಗಾರಿಗಳಲ್ಲಿ ತೊಡಗಿಸಿಕೊಂಡ ಗಣ್ಯರನ್ನು ಗೌರವಿಸಲಾಯಿತು. ಕ್ರೀಡಾರಂಗದಲ್ಲಿ ರಾಷ್ಟ್ರಮಟ್ಟದ ಸ್ಫರ್ಧೆಗಳಲ್ಲಿ ಭಾಗವಹಿಸಿ ಪದಕ ಗಳಿಸಿದ ಮಣ್ಣಿನ ಮಗ ಶ್ರೀಕಾಂತ ಮಧ್ಯಸ್ಥರನ್ನು ಸಮ್ಮಾನಿಸಲಾಯ್ತು.
     ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ ನಾಯರಿ ಸ್ವಾಗತಿಸಿದರು. ಹೊರೆಕಾಣಿಕೆ ನಿರ್ವಹಣಾ ಸಮಿತಿ ಸಂಚಾಲಕ ರಾಮಚಂದ್ರ ನಾಯರಿ ಪ್ರಸ್ತಾವನೆಗೈದರು. ಆಡಳಿತ ಮಂಡಳಿ ಕಾರ್ಯದರ್ಶಿ ಶ್ಯಾಮಸುಂದರ ನಾಯರಿ ವಂದಿಸಿದರು. ನರೇಂದ್ರ ಕುಮಾರ್‌ ಕೋಟ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯವೈವಿಧ್ಯ ಮತ್ತು ಮೂಡಬಿದ್ರೆಯ 'ಪಿಂಗಾರ' ಕಲಾವಿದರಿಂದ 'ನಾವು ನಮ್ಮಷ್ಟಕ್ಕೆ' ಎಂಬ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com