ಜನಸೇವೆ ಮಾಡಲಿಕ್ಕೆ, ರಾಜಕೀಯಕ್ಕೆ ಬಂದಿದ್ದೆನೆ- ಬಿಎಂ ಸುಕುಮಾರ ಶೆಟ್ಟಿ

 ‘ಬೈಂದೂರಿಗೆ ಒಂದು ಹೊಸ ರೂಪ, ಅಭಿವೃದ್ಧಿಯ ಕಾಯಕಲ್ಪ ನೀಡಬೇಕಿದೆ’ ಎಂದು ಮಾತು ಆರಂಭಿಸಿದವರು ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಂ. ಸುಕುಮಾರ ಶೆಟ್ಟಿ.
   
   ಸಂದರ್ಶನದಲ್ಲಿ ಮಾತನಾಡಿ, ‘ನನಗೆ ದೊಡ್ಡ ದೊಡ್ಡ ಮಾತುಗಳನ್ನು ಆಡಲು ಬರುವುದಿಲ್ಲ, ಆದರೆ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿ ತೋರಿಸುವೆ’ ಎಂದಷ್ಟೇ ಹೇಳಿದರು.

ಇದಕ್ಕಿದ್ದಂತೆ ರಾಜಕೀಯ ಪ್ರವೇಶ ?
    ಇಪ್ಪತ್ತು ವರ್ಷಗಳಿಂದ ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಕಷ್ಟು ಸೇವೆ ಸಲ್ಲಿಸಿರುವೆ. ಕೊಲ್ಲೂರು ಕ್ಷೇತ್ರದ ಆಡಳಿತ ಮೊಕ್ತೇಸರನಾಗಿದ್ದಾಗ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದೆ. ಕ್ಷೇತ್ರದಲ್ಲಿ ಸಾಕಷ್ಟು ಸೌಲಭ್ಯಗಳ ಕೊರತೆಯಿತ್ತು. ಅದೆಲ್ಲವನ್ನೂ ಹೋಗಲಾಡಿಸಿ, ಇಡೀ ದೇಶದಲ್ಲೇ ಗುರುತಿಸುವಂಥ ತಾಣವನ್ನಾಗಿ ರೂಪಿಸಿದೆ. ಬರೀ ಕೇರಳದಿಂದ ಮಾತ್ರ ಬಸ್ಸುಗಳ ಸೌಕರ್ಯವಿತ್ತು. ನಾನು ತಮಿಳುನಾಡು ಮತ್ತಿತರ ಪ್ರಮುಖ ರಾಜ್ಯಗಳಿಗೆ ಭೇಟಿ ನೀಡಿ, ಅಲ್ಲಿಂದಲೂ ಬಸ್ಸಿನ ವ್ಯವಸ್ಥೆ ಕಲ್ಪಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹೋಗುವಂತೆ ಮಾಡಿದೆ. ಜತೆಗೆ ಅವರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸಿದೆ. ಶ್ರೀ ಮೂಕಾಂಬಿಕೆಗೆ ಸ್ವರ್ಣರಥ ಅರ್ಪಿಸುವ ಯೋಜನೆಯನ್ನು ಯಶಸ್ವಿಯಾಗಿ ಸಾಕಾರಗೊಳಿಸಿದೆ. ಇಡೀ ರಾಜ್ಯದಲ್ಲಿ (ದೇಶದ ಬಗ್ಗೆ ಮಾಹಿತಿ ಇಲ್ಲ)ಪೂರ್ಣಪ್ರಮಾಣದ ಸ್ವರ್ಣ ರಥ ಇರುವುದು ಕೊಲ್ಲೂರಿನಲ್ಲಿ ಮಾತ್ರ. ನಮ್ಮದು ಸ್ವರ್ಣ ಲೇಪಿತವಲ್ಲ, ಸಂಪೂರ್ಣ ಚಿನ್ನದ್ದು. 
ಆದರೆ, ರಾಜಕೀಯಕ್ಕೆ ಪ್ರವೇಶಿಸಿದ್ದು ಅನಿಶ್ಚಿತ. ಎರಡು ತಿಂಗಳ ಹಿಂದೆ ಮತ್ತಷ್ಟು ಸಾರ್ವಜನಿಕ ಸೇವೆ ಮಾಡಲು ರಾಜಕೀಯ ಕ್ಷೇತ್ರ ಒಂದು ಸಾಧನ ಎನಿಸಿತು. ಅದಕ್ಕಾಗಿ ಬಿಜೆಪಿಯನ್ನು ಸೇರಿದೆ, ಸ್ಪರ್ಧಿಸುವ ಅವಕಾಶವೂ ಸಿಕ್ಕಿದೆ. ಆಗ ಧಾರ್ಮಿಕ, ಶಿಕ್ಷಣ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದೆ. ಈಗ ಸಾಮಾಜಿಕ ಕೆಲಸಗಳನ್ನು ಮಾಡುವ ಆಸೆ. ಜನಸೇವೆ ಮಾಡುತ್ತಾ, ಸರಕಾರದ ಸೌಲಭ್ಯವನ್ನು ಸಾಮಾನ್ಯ ಜನರಿಗೆ ಮುಟ್ಟಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆಯೇ ಹೊರತು ರಾಜಕೀಯ ಮಾಡೋಕ್ಕೆ ಮಾತ್ರ ಹೋಗೋಲ್ಲ, ಇದು ಸತ್ಯ. 

ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮೊದಲೇ ಯೋಚಿಸಿದ್ದೀರಾ? ಅಥವಾ ಗೆದ್ದ ಮೇಲೆ ಯೋಚಿಸುತ್ತೀರಾ?
    ‘ನನಗೆ ಈ ಕ್ಷೇತ್ರ ಹೊಸದಲ್ಲ. ಈ ಕ್ಷೇತ್ರದಲ್ಲೇ ಹುಟ್ಟಿದವನು, ಬೆಳೆದವನು. ಜತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವನು. ಹಿಂದಿನಿಂದಲೂ ನನಗೆ ಶಿಕ್ಷಣ ಕ್ಷೇತ್ರದ ಮೇಲೆ ಪ್ರೀತಿ. ಕಾರಣವಿಷ್ಟೇ, ನನ್ನ ದೃಷ್ಟಿಯಲ್ಲಿ ಶಿಕ್ಷಣ ಮಾತ್ರ ಈ ಸಮಾಜವನ್ನು ಬದಲಾಯಿಸಬಲ್ಲದು, ಅಭಿವೃದ್ಧಿಯತ್ತ ಕೊಂಡೊಯ್ಯಬಲ್ಲದು. ಈ ನಿಟ್ಟಿನಲ್ಲಿ ಕೊಲ್ಲೂರಿನ ಸುತ್ತಮುತ್ತ 18 ಹಳ್ಳಿಗಳ ಮಕ್ಕಳು ಕನಿಷ್ಠ 8 ಕಿಮೀ ನಡೆದು ಶಾಲೆಗೆ ಹೋಗಬೇಕಿತ್ತು. ಎಷ್ಟೋ ಮನೆಗಳಲ್ಲಿ ಇದೇ ಕಾರಣದಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಅದರಲ್ಲೂ ಹೆಣ್ಣು ಮಕ್ಕಳಂತೂ ನಡೆದು ಹೋಗುವುದು ದುಸ್ಸಾಹಸವೇ ಸರಿ. ಇಂಥ ಸಂದರ್ಭದಲ್ಲಿ ನಾನು ನಾಲ್ಕು ದಿಕ್ಕಿನಲ್ಲಿ ಶಾಲೆಗಳನ್ನು ಆರಂಭಿಸಿದೆವು. ಹೆಣ್ಣಮಕ್ಕಳಂತೂ ಶಿಕ್ಷಣದಿಂದ ವಂಚಿತರಾಗಬಾರದೆನ್ನುವುದು ನನ್ನ ದೃಷ್ಟಿ. ಯಾಕೆಂದರೆ, ಒಂದು ಹೆಣ್ಣು ಕಲಿತರೆ, ಅವರ ಮನೆಯಲ್ಲಿರುವವರೆಲ್ಲರೂ ಶಿಕ್ಷಿತರಾಗಬಲ್ಲರು. ಕೊಲ್ಲೂರಿನ ಧರ್ಮದರ್ಶಿಯಾಗಿದ್ದಾಗ ಕಷ್ಟಪಟ್ಟು ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳನ್ನು ಮಂಜೂರು ಮಾಡಿಸಿದೆ. ಇದರ ಮೂಲ ಉದ್ದೇಶವೆಂದರೆ ನಮ್ಮೂರಿನ ಮಕ್ಕಳು ಕಲಿಯಲಿಕ್ಕೆ ದೂರದೂರಿಗೆ ಹೋಗಬಾರದೆಂಬುದೇ. 

     ನನ್ನ ಶಿಕ್ಷಣದ ಬಗೆಗಿನ ಅಲೋಚನೆ ಅಷ್ಟಕ್ಕೇ ನಿಲ್ಲಲಿಲ್ಲ. ಕುಂದಾಪುರ ಎಜುಕೇಷನ್ ಸೊಸೈಟಿ ಮೂಲಕ ಅತ್ಯಂತ ಒಳ್ಳೆಯ ಶಾಲೆ ಕಟ್ಟಿದ್ದೇನೆ. ನಾನು ಇದರೊಳಗೆ ಸೇರಿಕೊಳ್ಳುವ ಮೂಲಕ 700 ಮಕ್ಕಳು ಕಲಿಯುತ್ತಿದ್ದರು. ಇವತ್ತು 3 ಸಾವಿರ ಮಕ್ಕಳಿಗೆ ಶಿಕ್ಷಣ ಹೇಳಿಕೊಡುವ ಮಟ್ಟಿಗೆ ಬೆಳೆದಿದೆ. ಜಿಲ್ಲೆಗೇ ಎರಡು ವರ್ಷದಿಂದ ಪ್ರಥಮ ಸ್ಥಾನ ಗಳಿಸಿದೆ. ಇದರೊಂದಿಗೆ ಬಿಬಿ ಹೆಗ್ಡೆ ಕಾಲೇಜು, ಶಾಲೆಗಳು..ನನ್ನ ಶಿಕ್ಷಣ ಯಜ್ಞದ ಕಾರ್ಯ ಇಲ್ಲಿಗೇ ನಿಂತಿಲ್ಲ. ಕರ್ನಾಟಕ ಸರಕಾರ ಆರಂಭಿಸುವುದಕ್ಕಿಂತ ಮೊದಲೇ ಕೊಲ್ಲೂರು ದೇವಸ್ಥಾನದಿಂದ 26ಸಾವಿರ ಮಂದಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸಿದ್ದೆ. 1977 ರಲ್ಲೇ ಕುಂದಾಪುರದ ಭಂಡಾರ್ ಕರ್ಸ್ ಕಾಲೇಜಿನ ವಿದ್ಯಾರ್ಥಿ ನಾಯಕನಾಗಿದ್ದೆ. ಆಗಲೇ ಮಧ್ಯಾಹ್ನದ ಊಟ ಮಾಡಲು ಅವಕಾಶವಿಲ್ಲದ 400 ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದೆ. ಅಂದು ಆರಂಭವಾದ ಆ ಕಾರ್ಯ ಇಂದಿಗೂ ನಿಂತಿಲ್ಲ. ಮಕ್ಕಳು ಹಸಿದು ಶಾಲೆಗೆ ಬರಬಾರದೆಂಬ ಚಿಂತನೆ ಈ ಕೆಲಸವನ್ನು ಸಾಧ್ಯವಾಗಿಸಿತು. ಇದಕ್ಕಾಗಿಯೇ, ಸೌಲಭ್ಯಗಳನ್ನು ಕಲ್ಪಿಸಿದರೆ ಅದು ಮಧ್ಯವರ್ತಿಗಳ ಪಾಲಾಗುತ್ತದೆ, ಅದರ ಬದಲಿಗೆ ಮಕ್ಕಳಿಗೆ ಶಿಕ್ಷಣ ನೀಡಿ ಎಂಬುದು ನನ್ನ ಧ್ಯೇಯವಾಕ್ಯ.

ಶಿಕ್ಷಣದ ಬಗ್ಗೆ ಸರಿ, ಉಳಿದ ಅಭಿವೃದ್ಧಿ ಬಗ್ಗೆ ನಿಮ್ಮ ದೃಷ್ಟಿಕೋನ ?
     ಬಹಳ ಸ್ಪಷ್ಟ. ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲೂಕೆಂದರೆ ಬೈಂದೂರು ತಾಲೂಕು. ಎಲ್ಲ ದೃಷ್ಟಿಯಲ್ಲೂ ಈ ತಾಲೂಕು ಹಿಂದುಳಿದಿದೆ. ಇಲ್ಲಿ ಅಭಿವೃದ್ಧಿ ಕೆಲಸಗಳು ಆರಂಭವಾಗಿರುವುದೇ ಕಳೆದ ಬಾರಿಯ ಶಾಸಕರಾದ ನಮ್ಮ ಪಕ್ಷದವರೇ ಆದ ಲಕ್ಷ್ಮೀನಾರಾಯಣರಿಂದ. ನನ್ನ ಕ್ಷೇತ್ರದಲ್ಲಿ ಆಗಿರುವುದಕ್ಕಿಂತಲೂ, ಆಗಬೇಕಾದದ್ದು ಬಹಳಷ್ಟಿದೆ. ಕೈಗಾರಿಕೆಗಳಿಂದ ಹಿಡಿದು ಕೃಷಿ ಕ್ಷೇತ್ರದವರೆಗೆ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧ್ಯವಾಗಬೇಕಿದೆ. ಒಂದು ಊರಿನಲ್ಲಿ ಕೈಗಾರಿಕೆ ಮತ್ತಿತರ ಸೌಲಭ್ಯಗಳು ಬರಬೇಕಾದರೆ ಹತ್ತಿರದಲ್ಲಿ ಎಲ್ಲ ಬಗೆಯ ಸಾಗಣೆ ಸೌಲಭ್ಯವಿರಬೇಕು. 
   ಹಲವು ವರ್ಷಗಳ ಹಿಂದೆಯೇ ಇಲ್ಲೇ ಹತ್ತಿರದ ಒತ್ತಿನೆಣೆ ಪ್ರದೇಶದಲ್ಲಿ ವಿಮಾನ ನಿಲ್ದಾಣವಾಗಬೇಕೆಂದು ಪ್ರದೇಶವನ್ನು ಸರ್ವೇ ಮಾಡಿಸಿದೆವು. ಉದ್ಯಮಿ ಆರ್ ಎನ್ ಶೆಟ್ಟಿ ಮತ್ತು ನನ್ನ ಕನಸದು. ಆದರೆ, ಅದು ಸರ್ವೇ ಹಂತಕ್ಕೇ ನಿಂತಿತು. ಅದೇನಾದರೂ ಸಾಧ್ಯವಾಗದಿದ್ದರೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದವು. ಈಗ, ಕೇವಲ ವಿಮಾನ ನಿಲ್ದಾಣಕ್ಕಾಗಿ 120 ಕಿ.ಮೀ ದೂರ ಹೋಗಬೇಕು. 2004 ರಲ್ಲಿ ಆರಂಭಿಸಿದ ಹೋರಾಟ, ಮತ್ತೆ ಮುಂದುವರಿಸಿ ಒತ್ತಿನೆಣೆಗೆ ವಿಮಾನ ನಿಲ್ದಾಣವನ್ನು ತರುವೆ. 
   ಕೊಲ್ಲೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಹಾಗಾಗಿ ಇನ್ನಷ್ಟು ಅಭಿವೃದ್ಧಿ ಕೆಲಸಗಳಾಗಬೇಕು. ನಮ್ಮ ಹಳ್ಳಿಗಳ ರಸ್ತೆ ಅಷ್ಟೊಂದು ಚೆನ್ನಾಗಿಲ್ಲ, ಮಳೆಗಾಲದಲ್ಲಂತೂ ಬಹಳ ಕಷ್ಟ. ಅದನ್ನು ಸರಿಪಡಿಸಬೇಕು. ಇಲ್ಲಿ ಗೇರು ಬೀಜ ಮತ್ತು ಹೆಂಚಿನ ಕಾರ್ಖಾನೆ ಸಾಕಷ್ಟಿವೆ. ಇದಲ್ಲದೇ ಇನ್ನೂ ಉತ್ತಮ ಕೈಗಾರಿಕೆಗಳು ಬಂದರೆ, ಈ ಊರಿನ ಜನ ಕೆಲಸಕ್ಕೆಂದು ಬೇರೆ ಊರಿಗೆ ಹೋಗೋದು ತಪ್ಪುತ್ತದೆ.
    ನಾವು ಉಪ್ಪು ನೀರು ಕುಡಿದು ಬದುಕುವವರು. ಆದರೆ, ಎಲ್ಲ ಹಳ್ಳಿಗಳಿಗೂ ಸಿಹಿನೀರು ಒದಗಿಸಬೇಕು. ನಮ್ಮ ಕ್ಷೇತ್ರದ ಸುತ್ತಮುತ್ತ ಹಲವು ನದಿಗಳು ಹರಿದು ಹೋಗುತ್ತವೆ. ಅವುಗಳ ನೀರನ್ನು ಸಮರ್ಪಕವಾಗಿ ಬಳಸಿ, ಈ ಹಳ್ಳಿಗಳಿಗೆ ಬಳಸಿಕೊಂಡರೆ ಅನಗತ್ಯ ಪೋಲು ತಪ್ಪುತ್ತದೆ ಹಾಗೂ ಜನರಿಗೆ ಸಿಹಿನೀರು ಸಿಗುತ್ತದೆ. ಈ ದೃಷ್ಟಿಯಲ್ಲಿ ಯೋಜನೆಯನ್ನು ರೂಪಿಸುವೆ.
      ಕ್ಷೇತ್ರದಲ್ಲಿ ವಸತಿ ವಂಚಿತರ ಸಂಖ್ಯೆ ಬಹಳಷ್ಟಿದೆ. ಅವರಿಗೆಲ್ಲಾ ಒಂದು ಸೂರು ಕಟ್ಟಿಕೊಳ್ಳುವ ವ್ಯವಸ್ಥೆ ಮಾಡಬೇಕು. ಹಳೆಯ ದೇವಸ್ಥಾನಗಳನ್ನು ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳುವೆ.
ಕೊಲ್ಲೂರಿಗೆ ಮಂಜೂರಾದ ಎಂಜಿನಿಯರಿಂಗ್ ಮತ್ತಿತರ ಕಾಲೇಜುಗಳ ಆರಂಭಕ್ಕೆ ಪ್ರಯತ್ನಿಸುವೆ.
ನಮ್ಮ ಊರಿನಲ್ಲಿ ಸಣ್ಣಪುಟ್ಟ ಆಸ್ಪತ್ರೆಗಳಿವೆ, ಸುಸಜ್ಜಿತ ದೊಡ್ಡ ಮಟ್ಟದ ಆಸ್ಪತ್ರೆಗಳಿಲ್ಲ. ಇನ್ನು ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇರುವುದಿಲ್ಲ. ಹಾಗಾಗಿ ನೂರು ಹಾಸಿಗೆ ಸಾಮಥ್ರ್ಯದ ಸುಸಜ್ಜಿತ ಆಸ್ಪತ್ರೆಯನ್ನು ತರುವುದು ನನ್ನ ಉದ್ದೇಶ.
      ಬೈಂದೂರು ತಾಲೂಕಾಗಿ ಘೋಷಿತವಾಗಿದೆ. ಆದರೆ, ಯಾವ ಅಭಿವೃಧ್ಧಿ ಕೆಲಸವೂ ನಡೆದಿಲ್ಲ. ಒಂದು ಸ್ಪಷ್ಟವಾದ ಮಾಸ್ಟರ್ ಪ್ಲ್ಯಾನ್ ರಚಿಸಿ, ಒಂದು ಅತ್ಯಂತ ಉತ್ತಮ ತಾಲೂಕಾಗಿ ರೂಪಿಸುವೆ. 
ಬೈಂದೂರು ಕ್ಷೇತ್ರ ಅಭಿವೃದ್ಧಿಯ ಲೆಕ್ಕಾಚಾರದಲ್ಲಿ ಉಳಿದ ಕ್ಷೇತ್ರಗಳಿಗಿಂತ ಹತ್ತು ವರ್ಷ ಹಿಂದಿದೆ. ಆ ಅಂತರವನ್ನು ಹೋಗಲಾಡಿಸಿ ರಾಜ್ಯಕ್ಕೇ ಪ್ರಥಮ ಕ್ಷೇತ್ರವಾಗಿ ಮಾಡಿಸಬೇಕೆಂಬುದು ನನ್ನ ಅಭಿಲಾಷೆ. ನಮ್ಮ ಪಕ್ಷದವರೇ ಆದ ಲಕ್ಷ್ಮೀನಾರಾಯಣರು ಆರಂಭಿಸಿದ ಅಭಿವೃದ್ಧಿ ಪರ್ವವನ್ನು ಮುಂದುವರಿಸಿಕೊಂಡು ಹೋಗುವೆ. ಮತದಾರರು ಅವಕಾಶ ಕಲ್ಪಿಸಬೇಕಷ್ಟೇ.

 ನೀವು ಬಿಜೆಪಿಯನ್ನೇ ಸೇರಿದ್ದು ಯಾಕೆ ?
     ಆ ಕುರಿತು ಸ್ಪಷ್ಟವಾಗ ಹೇಳುವುದಾದರೆ ನನಗೆ ಬಿಜೆಪಿಯ ನರೇಂದ್ರ ಮೋದಿ ಇಷ್ಟವಾದರು. ಅಭಿವೃದ್ಧಿ ಮತ್ತು ಆಡಳಿತದತ್ತ ಅವರ ಚಿಂತನೆ ನನ್ನನ್ನು ಬಿಜೆಪಿಯತ್ತ ಸೆಳೆಯಿತು. ಬಿಜೆಪಿಯಲ್ಲಿ ಅವಕಾಶ ಕೋರಿದೆ, ಸಿಕ್ಕಿತು. ಈಗ ಬಿಜೆಪಿ ಕೊಳಕೆಲ್ಲಾ ಹೊರಹೋಗಿ, ಶುದ್ಧವಾಗಿದೆ. ಇದರೊಂದಿಗೆ ಸಂಘ ಪರಿವಾರದವರ ಶಿಸ್ತು ಮತ್ತು ಸಂಘಟನೆಯಿಂದ ಪ್ರಭಾವಿತಗೊಂಡು ಒಳ್ಳೆಯ ಕೆಲಸ ಮಾಡಲು ಈ ಪಕ್ಷವನ್ನು ಸೇರಿದೆ. 

ಭ್ರಷ್ಟಾಚಾರದ ಬಗ್ಗೆ ನಿಮ್ಮ ಅಭಿಪ್ರಾಯ?
ಒಳ್ಳೇದು ಅನ್ನಲಿಕ್ಕೆ ಹೇಗೆ ಮನಸ್ಸು ಬರುತ್ತೆ. ಭ್ರಷ್ಟಾಚಾರ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಶ ಮಾಡುತ್ತೆ. ನಾನೂ ಸಹ ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಆಸ್ಪದ ನೀಡುವುದಿಲ್ಲ. ಜನರಿಗೆ ಅತ್ಯುತ್ತಮ ಸೇವೆ ಒದಗಿಸುವತ್ತ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. ನನ್ನ ದೃಷ್ಟಿಯೇನಿದ್ದರೂ ಅಭಿವೃದ್ಧಿ, ಅಭಿವೃದ್ಧಿ ಮತ್ತು ಅಭಿವೃದ್ಧಿ.

ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಂ. ಸುಕುಮಾರ ಶೆಟ್ಟಿ. ಆರ್ ಎನ್ ಲೈವ್ ನೊಂದಿಗೆ ನಡೆಸಿದ ಸಂದರ್ಶನ

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com