ಕೇಂದ್ರ ಯೋಜನೆಗಳೂ ಪಂಚಾಯತ್ ವ್ಯಾಪ್ತಿಗೆ ಬರಲಿ: ಎಸ್. ಜನಾರ್ದನಕುಂದಾಪುರ:  ವಿಕೇಂದ್ರೀಕರಣದ ಮೂಲಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಪಾಲನೆ ಪಂಚಾಯತ್ ರಾಜ್ ಉದ್ದೇಶ. ಅದನ್ನು ಸಾಧಿಸಲು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹೊಣೆ, ಹಣಕಾಸು ಮತ್ತು ಮಾನವ ಸಂಪನ್ಮೂಲನದ ಸಂತುಲಿತ ವರ್ಗಾವಣೆ ಆಗಬೇಕು. ಈಗ ರಾಜ್ಯದ ಒಂದಷ್ಟು ಮತ್ತು ಮತ್ತು ಕೇಂದ್ರದ ಒಂದೆರಡು ಯೋಜನೆಗಳ ಅನುಷ್ಠಾನ ಇವುಗಳ ಮೂಲಕ ಆಗುತ್ತಿವೆ. ಅದು ಸಾಲದು. ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಯೋಜನೆ ಮತ್ತು ಕಾರ್ಯಕ್ರಮಗಳು ಅವುಗಳ ವ್ಯಾಪ್ತಿಗೆ ಬರಬೇಕು ಎಂದು ಎ. 24ರಂದು ನವದೆಹಲಿಯ ವಿಜ್ಞಾನ ಭವನದ ಸಮ್ಮೇಳನ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಅಂಗವಾಗಿ ಏರ್ಪಡಿಸಿದ್ದ ಗುಂಪುಚರ್ಚೆಯಲ್ಲಿ ಮರವಂತೆ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಎಸ್. ಜನಾರ್ದನ ಪ್ರತಿಪಾದಿಸಿದರು.
     'ಕೇಂದ್ರ ಪುರಸ್ಕøತ ಯೋಜನೆಗಳಲ್ಲಿ ಪಂಚಾಯತ್ ಪಾತ್ರ' ಕುರಿತು ಅವರು ಕರ್ನಾಟಕ ರಾಜ್ಯದ ಪ್ರತಿನಿಧಿಗಳ ಪರವಾಗಿ ಅನ್ನಿಸಿಕೆ ವ್ಯಕ್ತಪಡಿಸಿದರು. 
      ಹೊಣೆ, ಹಣಕಾಸು, ಮಾನವ ಸಂಪನ್ಮೂಲ ವರ್ಗಾವಣೆಯ ವಿಚಾರ ಬಂದಾಗ ರಾಜ್ಯ ಯೋಜನೆಗಳನ್ನಷ್ಟೆ ದೃಷ್ಟಿಯಲ್ಲಿ ಇರಿಸಿಕೊಳ್ಳಲಾಗುತ್ತಿದೆ. ಆದರೆ  ಕೇಂದ್ರ ಪುರಸ್ಕøತ ಯೋಜನೆಗಳಾದ ಸರ್ವ ಶಿಕ್ಷಾ ಅಭಿಯಾನ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ರಾಷ್ಟ್ರೀಯ ಆರೋಗ್ಯ ಮತ್ತು ನೈರ್ಮಲ್ಯ ಅಭಿಯಾನ, ರಾಷ್ಟ್ರೀಯ ಜೀವನೋಪಾಯ ಅಭಿಯಾನ, ರಾಷ್ಟ್ರೀಯ ತೋಟಗಾರಿಕಾ ಅಭಿಯಾನ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಸಂಸದರ ಪ್ರದೇಶಾಭಿವೃದ್ಧಿ ನಿಧಿಗಳಂತಹ ದೇಶದ ಮಹತ್ವಾಕಾಂಕ್ಷೆಯ ಗ್ರಾಮೀಣಾಭಿವೃದ್ಧಿ ಯೊಜನೆಗಳು ಪಂಚಾಯತ್ ರಾಜ್ ವ್ಯಾಪ್ತಿಯಿಂದ ಹೊರಗಿವೆ. ಇದು ಸಂವಿಧಾನದ ಆಶಯದ ವಿಕೇಂದ್ರೀಕರಣ ತತ್ವಕ್ಕೆ ಹೊಂದಿಕೊಳ್ಳುವುದಿಲ್ಲ. ಪಂಚಾಯತ್ ರಾಜ್ ಭೌಗೋಲಿಕ ವ್ಯಾಪ್ತಿಯಲ್ಲಿ ಕಾರ್ಯಾಚರಿಸುವ ಕೇಂದ್ರದ ಅಭಿವೃದ್ಧಿಪರ ಇಲಾಖೆಗಳೂ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸ್ಪಂದಿಸುವಂತಾಗಬೇಕು ಎಂದು ಅವರು ಒತ್ತಾಯಿಸಿದರು.  
     ನಿರ್ದೇಶಕ ಶಶಿ ಮಲಿಕ್ ಸಂಯೋಜಕರಾಗಿದ್ದ ಈ ಗುಂಪು ಚರ್ಚೆಯಲ್ಲಿ ಎ. ಕೆ. ಮಿಶ್ರಾ, ಜನಾರ್ದನ, ಡಿ. ಎಲ್. ಅಲ್ವಾಧಿ, ಅನೂಪ್ ಅರವಿಂದ್, ಪ್ರೇಮ್‍ಚಂದ್ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.       

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com