ಹಾಲಾಡಿ: ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವ ನನಗೆ ಕಳೆದ ಮೂರು ಬಾರಿ ಶಾಸಕನಾಗಿ, ಇಲ್ಲಿಯವರೆಗೆ ಜನಸೇವೆ ಮಾಡಿರುವ ತೃಪ್ತಿ ಇದೆ. ಸಮಾಜದ ಯಾವ ಜಾತಿಯ ನಡುವೆಯೂ ತಾರತಮ್ಯ ಮಾಡದೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇನೆ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಶನಿವಾರ ಹಾಲಾಡಿಯ ಶ್ರೀ ದುರ್ಗಾಪರಮೇಶ್ವರೀ ಕಲ್ಯಾಣ ಮಂಟಪದಲ್ಲಿ ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಹಿತೈಷಿ ಅಭಿಮಾನಿ ಕಾರ್ಯಕರ್ತರ ಸಮಾವೇಶ 'ನಮಗಾಗಿ ನೀವು; ನಿಮ್ಮದೊಂದಿಗೆ ನಾವು' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕರ್ತರ ನಿರಂತರ ಒತ್ತಡಕ್ಕೆ ಮಣಿದು ನಾನು ಮತ್ತೆ ಸ್ಪರ್ಧಿಸುತ್ತಿದ್ದೇನೆ. ಹಾಲಾಡಿ ಅವರು ಅಧಿವೇಶನದಲ್ಲಿ ಮಾತನಾಡದ ಶಾಸಕ ಎಂದು ಹಲವರು ಆರೋಪಿಸುತ್ತಾರೆ. ನಾನು ಯಾವತ್ತೂ ಪ್ರಚಾರಕ್ಕಾಗಿ ಮಾತನಾಡುವ ವ್ಯಕ್ತಿ ಅಲ್ಲ. ಆಶ್ರಯ ಮನೆ, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ, ವಾರಾಹಿ ಯೋಜನೆ, ಕರಾವಳಿಯ ಮತ್ಸéಕ್ಷಾಮ, ಗ್ರಾಮ ಸಹಾಯಕರ ಗೌರವ ಧನ ಏರಿಕೆ ಮುಂತಾದ ಹಲವಾರು ಸಮಸ್ಯೆಗಳ ಬಗ್ಗೆ ನಿರಂತರವಾಗಿ ಸದನದಲ್ಲಿ ಮಾತನಾಡಿದ್ದೇನೆ ಎಂದರು.
ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಗಣಪತಿ ಶ್ರೀಯಾನ್ ಮಾತನಾಡಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರದ್ದು ಮೇರು ವ್ಯಕ್ತಿತ್ವ. ಜನಸಾಮಾನ್ಯರನ್ನು ಪ್ರೀತಿಯಿಂದ ಗುರುತಿಸಿ ಗೌರವಿಸುವ ಗುಣ ಹೊಂದಿದವರು. ಎಲ್ಲ ಪಕ್ಷದವರು ಬೆಂಬಲಿಸುವಂತ ವ್ಯಕ್ತಿತ್ವ ಅವರದು. ಅದಕ್ಕಾಗಿ ನಾನೂ ಕೂಡ ಬಿಜೆಪಿಯನ್ನು ಬಿಟ್ಟು ಅವರ ಪರವಾಗಿ ದುಡಿಯುತ್ತಿದ್ದೇನೆ ಎಂದರು.
ಹಾಲಾಡಿ ಜಿ.ಪಂ. ಸದಸ್ಯ ರಶ್ವತ್ ಕುಮಾರ್ ಶೆಟ್ಟಿ, ಜೆಡಿಎಸ್ ಮುಖಂಡ ಸಬ್ಲಾಡಿ ಮಂಜಯ್ಯ ಶೆಟ್ಟಿ, ತಾ.ಪಂ. ಅಧ್ಯಕ್ಷೆ ದೀಪೀಕಾ ಎಸ್. ಶೆಟ್ಟಿ, ತಾ.ಪಂ. ಸದಸ್ಯರಾದ ಪ್ರದೀಪ್ಚಂದ್ರ ಶೆಟ್ಟಿ, ಹಾಲಾಡಿ ರಮೇಶ್ ಶೆಟ್ಟಿ, ಆರ್. ನವೀನ್ಚಂದ್ರ ಶೆಟ್ಟಿ, ಪಾರ್ವತಿ ಕುಲಾಲ್, ಅಮಾಸೆಬೈಲು ಗ್ರಾ.ಪಂ. ಅಧ್ಯಕ್ಷ ಸದಾಶಿವ ಶೆಟ್ಟಿ , ವಕೀಲರಾದ ಟಿ.ಬಿ. ಶೆಟ್ಟಿ ಹಾಗೂ ಹಾಲಾಡಿ ಜಿ.ಪಂ. ವ್ಯಾಪ್ತಿಯ ಭಾರತೀಯ ಜನತಾ ಪಕ್ಷದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದರು.
ಬೆಳ್ವೆ ವಸಂತ ಕುಮಾರ ಶೆಟ್ಟಿ ಪ್ರಸ್ತಾವನೆಗೈದರು. ದಿನ್ಪಾಲ್ ಶೆಟ್ಟಿ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com