ಬೈಂದೂರು: ಒಂದು ಕ್ಷೇತ್ರದ ಹಾಲಿ ಶಾಸಕರೊಬ್ಬರ ಉಮೇದುವಾರಿಕೆಯನ್ನು ಬದಲಾಯಿಸುವ ತೀರ್ಮಾನ ಮಾಡುವ ಸಂದರ್ಭ ಕನಿಷ್ಠ ಸೌಜನ್ಯಕ್ಕಾದರೂ ಚರ್ಚಿಸದೇ ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಿರುವ ಬೆಳವಣಿಗೆಗಳು ಅವಿಭಜಿತ ಬೈಂದೂರಿನಲ್ಲಿ ಮಾತ್ರ ನಡೆಯುತ್ತಿರುವುದರಿಂದ ಮನಸ್ಸಿಗೆ ನೋವಾಗಿದೆ ಎಂದು ಬೈಂದೂರು ಬಿಜೆಪಿ ಶಾಸಕ ಕೆ. ಲಕ್ಷ್ಮೀನಾರಾಯಣ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.
ಕಳೆದ 5 ವರ್ಷಗಳಿಂದ ಬೈಂದೂರು ಕ್ಷೇತ್ರದ ಶಾಸಕನಾಗಿದ್ದ ನಾನು ಈ ಬಾರಿಯ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷದಿಂದ ಅಭ್ಯರ್ಥಿ ಆಕಾಂಕ್ಷಿಯಾಗಿದ್ದೆ. ಆದರೆ ನನ್ನ ಮನೆಗೆ ಬಂದಿದ್ದ ಸಂಘ ಪರಿವಾರದ ಪ್ರಮುಖರಾದ ಶಂಭು ಶೆಟ್ಟಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಅವರು ಬೈಂದೂರು ಕ್ಷೇತ್ರದ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಎಂದು ವ್ಯಕ್ತಿಯೋರ್ವರನ್ನು ಪರಿಚಯ ಮಾಡಿಕೊಟ್ಟಿರುವ ಬೆಳವಣಿಗೆ ನನಗೆ ಆಶ್ಚರ್ಯ ಹಾಗೂ ಆಘಾತವನ್ನು ತಂದಿದೆ ಎಂದು ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.
ಅಭಿವೃದ್ಧಿಯೇ ಧ್ಯೇಯ:
ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ 2008ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಿಂತ 7,900ಕ್ಕಿಂತಲೂ ಹೆಚ್ಚಿನ ಮತಗಳನ್ನು ಪಡೆದು ಜಯ ಗಳಿಸಿದ್ದೆ. ನನ್ನ ಶಾಸಕತ್ವದ ಅವಧಿಯಲ್ಲಿ ನಡೆದ ಲೋಕಸಭಾ ಚುನಾವಣೆ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿದ್ದ ಮತದಾರರು ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದ್ದರು. ಐದು ವರ್ಷ ಶಾಸಕನಾಗಿದ್ದ ಅವಧಿಯಲ್ಲಿ ಬೈಂದೂರು ಕ್ಷೇತ್ರದ ಅಭಿವೃದ್ಧಿಗಾಗಿ ಅಂದಾಜು 300 - 350 ಕೋಟಿ ರೂ. ಸರಕಾರಿ ಅನುದಾನಗಳ ಮೂಲಕ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿ ಇಲ್ಲಿನ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಮಾಡಿರುವ ಹಾಗೂ ಕಳೆದ ಹಲವು ವರ್ಷಗಳಿಂದ ಬೇಡಿಕೆಯಲ್ಲಿದ್ದ ಬೈಂದೂರು ತಾಲೂಕು ರಚನೆಯ ಘೋಷಣೆ ಮಾಡಿರುವ ತೃಪ್ತಿ ಇದೆ. ಗುಂಡೂರು, ಮರವಂತೆ ಬಂದರು, ಕೊಡೇರಿ ಕಿರು ಬಂದರು, ಬೈಂದೂರು ರೈಲು ನಿಲ್ದಾಣದ ಅಭಿವೃದ್ಧಿ ಯೋಜನೆಗಳಲ್ಲಿ ಒಬ್ಬ ಜವಾಬ್ದಾರಿಯುತ ಶಾಸಕನಾಗಿ ಕರ್ತವ್ಯ ನಿರ್ವಹಿಸಿರುವ ಕುರಿತು ಸಂತೃಪ್ತಿ ಇದೆ. ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರನಾಗಿರುವ ನಾನು ಶಾಸಕನಾಗಿದ್ದ ಅವಧಿಯಲ್ಲಿ ಯಾವುದೇ ಸ್ವಜನ ಪಕ್ಷಪಾತ ಮಾಡದೆ ಯಾವುದೇ ರೀತಿಯ ಭ್ರಷ್ಟಾಚಾರ ಆರೋಪಗಳಿಗೂ ಗುರಿಯಾಗದೇ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಿರುತ್ತೇನೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಪಕ್ಷದ ಟಿಕೆಟ್ ಇಲ್ಲವಂತೆ ಎನ್ನುವ ಸುದ್ದಿ ತೀವ್ರ ಆಘಾತವನ್ನು ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಅನ್ಯಾಯ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವ ನಾವು ಒಟ್ಟಾರೆ ಜನಾಭಿಪ್ರಾಯಕ್ಕೆ ಗೌರವ ನೀಡಬೇಕು. ಆದರೆ ಆ ವ್ಯವಸ್ಥೆಗೆ ವಿರುದ್ಧವಾಗಿ ಜಿಲ್ಲಾ ಮಟ್ಟದ ಪಕ್ಷದ ಹಾಗೂ ಸಂಘ ಪರಿವಾರದ ಪ್ರಮುಖರು, ಬೈಂದೂರಿನ ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯವನ್ನು ತೆಗೆದುಕೊಳ್ಳದೆ ಪರ್ಯಾಯ ಅಭ್ಯರ್ಥಿಯನ್ನು ಸೂಚಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ, ರಾಜ್ಯದ ಬಿಜೆಪಿ ಸರಕಾರಕ್ಕೆ ಸಂಖ್ಯಾಬಲದ ತೊಂದರೆ ಕಾಣಿಸಿಕೊಂಡ ಸಂದರ್ಭ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸರಕಾರದ ಪರವಾಗಿ ನಿಂತಿದ್ದ ನನಗೆ ಈ ರೀತಿಯ ಅನ್ಯಾಯ ಮಾಡುತ್ತಿರುವುದು ವೇದನೆ ತಂದಿದೆ.
ಮುಖಂಡರ ಸೇವೆಯಲ್ಲಿ ಲೋಪ !
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಜನರ ಸೇವೆಗಳನ್ನು ಮಾಡಬೇಕೇ ಹೊರತು ಮುಖಂಡರ ಸೇವೆಯನ್ನಲ್ಲ ಎನ್ನುವ ತಣ್ತೀದಲ್ಲಿ ನಂಬಿಕೆ ಇಟ್ಟಿರುವ ನನ್ನ ಶಾಸಕತ್ವದ ಅವಧಿಯಲ್ಲಿ ಜನರ ಸೇವೆಗೆ ಹೆಚ್ಚಿನ ಆದ್ಯತೆಯನ್ನು ನೀಡಿರುವುದರಿಂದ ಮುಖಂಡರ ಸೇವೆಯಲ್ಲಿ ಲೋಪವಾಗಿರಬೇಕು ಎನ್ನುವ ಭಾವನೆ ನನಗಿದೆ. ಪಕ್ಷ ನನಗಿನ್ನು ಅಭ್ಯರ್ಥಿ ನೀವಲ್ಲ ಎನ್ನುವ ಅಧಿಕೃತ ಮಾಹಿತಿ ನೀಡದೇ ಇದ್ದರೂ ಸಂಘ ಪರಿವಾರದ ಹಾಗೂ ಪಕ್ಷದ ಪ್ರಮುಖರು ನನ್ನ ಮನೆಗೆ ಬಂದು ಸಂಭಾವ್ಯ ಅಭ್ಯರ್ಥಿಯೊಬ್ಬರನ್ನು ಪರಿಚಯಿಸಿರುವುದರಿಂದ ಕ್ಷೇತ್ರದ ಮತದಾರರಿಗೆ ಪಕ್ಷದ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ವಿಷಯವನ್ನು ತಿಳಿಸುವ ಉದ್ದೇಶದಿಂದ ಪತ್ರಿಕಾ ಹೇಳಿಕೆ ನೀಡುತ್ತಿದ್ದೇನೆ ಎಂದು ವಿವರಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ - editor@kundapra.com