ಕುಂದಾಪುರ: ಈ ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ನಾಯಕ ಮಾಣಿ ಗೋಪಾಲ್ ಟಿಕೆಟ್ ದೊರಕದ ಕಾರಣ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕ ರಾಜೀನಾಮೆ ನೀಡಿದ್ದಾರೆ. ಸುಮಾರು 5 ಬಾರಿ ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ ಅವರಿಗೆ ಇದುವರೆಗೆ ಜಯ ಒಲಿದಿರಲಿಲ್ಲ. ಈ ಬಾರಿ 6ನೇ ಸಲ ಸ್ಪರ್ಧಿಸುವ ಆಕಾಂಕ್ಷೆ ಅವರಿಗಿತ್ತು. ಆದರೆ ಬಿಜೆಪಿ ಅವರನ್ನು ಕೈಬಿಟ್ಟು ಕಿಶೋರ್ ಕುಮಾರ್ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಮನನೊಂದ ಗೋಪಾಲ್ ಪಕ್ಷ ತೊರೆದಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಅವರು 1978ರಲ್ಲಿ ಮೊದಲ ಬಾರಿಗೆ ಕುಂದಾಪುರ ಕ್ಷೇತ್ರದಲ್ಲಿ ಸಂಜೀವ ಶೆಟ್ಟಿ ಅವರೊಂದಿಗೆ, 1983ರಲ್ಲಿ ಪಕ್ಷೇತರರಾಗಿ ಕಾಂಗ್ರೆಸ್ನ ಪ್ರತಾಪ್ಚಂದ್ರ ಶೆಟ್ಟಿ ಅವರೊಂದಿಗೆ ಸ್ಪರ್ಧಿಸಿ ಸೋತಿದ್ದರು. 1985 ಮತ್ತು 89ರಲ್ಲಿ ಜನತಾದಳದ ಮೂಲಕ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಜೆ.ಎಸ್. ಆಚಾರ್ ಎದುರು ಸ್ಪರ್ಧಿಸಿ ಅಲ್ಲೂ ಸೋಲನುಭವಿಸಿದರು. 198ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಸೇರಿ ಬೈಂದೂರಿನಲ್ಲಿ ಸ್ಪರ್ಧಿಸಿದರೂ ಸೋಲಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಅಲ್ಲಿಂದ ಬಿಜೆಪಿಗೆ ಬಂದರು, ಅದರ ಫಲವಾಗಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದರು. ಆದರೆ ಸರ್ಕಾರ ಸೂಕ್ತ ಅನುದಾನ ನೀಡದೆ ಪ್ರಾಧಿಕಾರದಲ್ಲಿ ತಮ್ಮ ಕನಸುಗಳು ಈಡೇರಿಲ್ಲ ಎನ್ನುವ ಕೊರಗು ಅವರಿತ್ತು. ಈಗ ಪಕ್ಷ ಅವರನ್ನು ಕೈಬಿಟ್ಟಿದೆ, ಅವರು ಪಕ್ಷವನ್ನೇ ಬಿಟ್ಟಿದ್ದಾರೆ.
ಕುಂದಾಪ್ರ ಡಾಟ್ ಕಾಂ - editor@kundapra.com