ಸರಕಾರಕ್ಕೆ ಕೇಳಿಸದೆ ಆರ್‌ಟಿಓ ಗೋಳು


 - ಜಾನ್ ಡಿಸೋಜ ಕುಂದಾಪುರ 
ವಾರದಲ್ಲಿ ಒಂದು ದಿನ ನಡೆಯುವ ಸಾರಿಗೆ ಇಲಾಖೆ ಶಿಬಿರ ನಿಜಕ್ಕೂ ವಾಹನ ಮಾಲೀಕರ ಅಷ್ಟೇ ಅಲ್ಲ ಆರ್‌ಟಿಓ ಅಧಿಕಾರಿಗಳು ಗೋಳು ಹೆಚ್ಚಿಸುತ್ತಿದೆ ಎಂಬುದಕ್ಕೆ ಮಂಗಳವಾರ ಇಲ್ಲಿನ ಸಂತೆ ಮಾರುಕಟ್ಟೆ ವಠಾರದಲ್ಲಿ ನಡೆದ ಶಿಬಿರವೇ ಸಾಕ್ಷಿ. 
    ಕಳೆದ 4 ವರ್ಷಗಳಿಂದ ಕುಂದಾಪುರದಲ್ಲೊಂದು ಆರ್‌ಟಿಓ ಕಚೇರಿ ತೆರೆಯಬೇಕೆಂಬ ಬೇಡಿಕೆಗೆ ಸೂಕ್ತ ಸ್ಪಂದನ ಸಿಗದಿರುವುದರಿಂದ ವಾಹನ ಮಾಲೀಕ- ಚಾಲಕರ ಪಾಡು ಹೇಳತೀರದು. ಬೈಕ್, ಆಟೋ ರಿಕ್ಷಾ, ಕಾರು ಇತರೆ ಘನ ವಾಹನಗಳ ಸರತಿ ಸಾಲು, ಅದರೊಂದಿಗೆ ಹೊಸದಾಗಿ ವಾಹನ ಚಾಲನಾ ಪರವಾನಗಿ ಪಡೆಯಲು ಬಯಸುವವರು ಮೈಲುಗಟ್ಟಲೆ ನಿಂತು ಕಾಯಬೇಕಾದ ಅನಿವಾರ್ಯತೆ. ಇದು ಮಾಮೂಲಿಯಾಗಿಬಿಟ್ಟಿದೆ. ಸಹಸ್ರಾರು ವಾಹನ ಮಾಲೀಕರ ಕೈಂಕರ್ಯಕ್ಕಾಗಿ ಬೆರಳಣಿಕೆಯ ಅಧಿಕಾರಿಗಳು ಊಟ- ಉಪಾಹಾರ ಬಿಟ್ಟು ಸಂಜೆ ತನಕ ಕರ್ತವ್ಯ ನಿರ್ವಹಿಸಬೇಕಾದ ಜರೂರತ್ ಬೇರೆ. 

ತಾಲೂಕಿಗೆ ಒಂದೇ ಶಿಬಿರ :
ಕುಂದಾಪುರ ನಗರ ವ್ಯಾಪ್ತಿಯಲ್ಲಿ ಅಂದಾಜು 36 ಸಾವಿರ ವಾಹನಗಳಿವೆ. ತಾಲೂಕಿನಲ್ಲಿ ವಾಹನ ಸಂಖ್ಯೆ ಲಕ್ಷಕ್ಕೂ ಮೀರಿದೆ. ಇವರೆಲ್ಲರೂ ಪ್ರತಿ ಮಂಗಳವಾರ ಕುಂದಾಪುರ ಸಂತೆ ಮಾರುಕಟ್ಟೆ ವಠಾರದಲ್ಲಿ ನಡೆಯುವ ಲೈಸನ್ಸ್, ಪಾಸಿಂಗ್, ಎಲ್‌ಎಲ್‌ಆರ್‌ಗಳ ತಪಾಸಣೆ ಮತ್ತು ಅರ್ಜಿ ಸಲ್ಲಿಸುವಿಕೆಗಾಗಿ ಬರಬೇಕು. ಹಳ್ಳಿಗಾಡಿನಿಂದ ಬರುವವರಿಗೆ ಇಡೀ ದಿನ ವೇಸ್ಟ್ ಆಗುತ್ತೆ. 
     ಗಡಿ ಭಾಗವಾದ ಶಿರೂರು, ಬೈಂದೂರು, ಹೊಸಂಗಡಿ, ಸಿದ್ಧಾಪುರ, ಅಮಾಸೆಬೈಲು, ಗೋಳಿಯಂಗಡಿ, ಕೋಟೇಶ್ವರ, ತೆಕ್ಕಟ್ಟೆ, ಕೋಟ ಭಾಗದ ವಾಹನ ಮಾಲೀಕರು ಆಗಮಿಸುತ್ತಾರೆ. ಬೆಳಗ್ಗೆ 9.30ಕ್ಕೆ ಆರಂಭವಾಗುವ ಶಿಬಿರ ಕೊನೆಗೊಳ್ಳುವುದು ಸೂರ್ಯ ಅಸ್ತಮಿಸಿದ ಮೇಲೆಯೇ. ಸಹಸ್ರಾರು ಅರ್ಜಿದಾರರ ಕೆಲಸ ಕಾರ್ಯ ನಿರ್ವಹಿಸುವಷ್ಟರಲ್ಲಿ ಅಧಿಕಾರಿಗಳು ಹೈರಾಣು. 
    ಎಲ್ಲರ ಕೆಲಸ ಆಗುತ್ತದೆ ಎಂಬ ನಂಬಿಕೆಯೂ ಇರದು. ಕೆಲಸ ಆಗದವರು ಇನ್ನೊಂದು ಮಂಗಳವಾರಕ್ಕಾಗಿ ಕಾಯಬೇಕು. ಉಡುಪಿ ಜಿಲ್ಲೆಯ ಕಾರ್ಕಳ, ಪಡುಬಿದ್ರಿ, ಕುಂದಾಪುರಲ್ಲಿ ಶಿಬಿರ ನಡೆಸಿ ನಾಗರಿಕರ ದೂರುದುಮ್ಮಾನ ಸ್ಪಂದಿಸುವ ಅಧಿಕಾರಿಗಳ ಬವಣೆ ಪರೀಕ್ಷಿಸುವ ಸರಕಾರ ಮಾತ್ರ ಕಣ್ಣುಮುಚ್ಚಿ ಕುಳಿತಿದೆ. 

ಕುಂದಾಪುರಕ್ಕೆ ಆರ್‌ಟಿಓ ಮಂಜೂರು:
       ದಿ. ಡಾ. ವಿ.ಎಸ್. ಆಚಾರ್ಯರ ಕಾಲಘಟ್ಟದಲ್ಲಿ ಬೇಡಿಕೆಗೆ ಸ್ಪಂದಿಸಿ ಕುಂದಾಪುರಕ್ಕೆ ಆರ್‌ಟಿಓ ಕಚೇರಿ ಮಂಜೂರುಗೊಳಿಸಿದ್ದರು. ಆದರೆ ಅದರ ಸಾಕಾರವಾಗಿಲ್ಲ. ಬೆಳೆಯುತ್ತಿರುವ ಕುಂದಾಪುರ ನಗರದಲ್ಲಿ ಆರ್‌ಟಿಓ ಕಚೇರಿ ಅಗತ್ಯತೆ ಇದೆ. ಉಡುಪಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಾಹನಗಳನ್ನು ಹೊಂದಿರುವ ಕುಂದಾಪುರದಲ್ಲಿ ಆರ್‌ಟಿಓ ಕಚೇರಿ ಆರಂಭಿಸದೇ ಇದ್ದಲ್ಲಿ ಸಂಕಷ್ಟ ಹೆಚ್ಚಳವಾಗಲಿದೆ. 
            -ರಾಜೇಶ್ ಕಾವೇರಿ, ಕುಂದಾಪುರ ಪುರಸಭೆ ಸದಸ್ಯ 

ಆರ್‌ಟಿಓ ಕಚೇರಿ ಆದ್ರೆ ಒಳಿತು:
ವಾರಕ್ಕೊಮ್ಮೆ ಇಲ್ಲಿ ಕ್ಯಾಂಪ್ ನಡೆಸುತ್ತಿದ್ದೇವೆ. 600ಕ್ಕೂ ಮಿಕ್ಕಿ ವಾಹನ ಮಾಲೀಕರು ಒಂದೇ ದಿನ ಮಾಡಿಕೊಂಡು ಹೋಗುತ್ತಾರೆ. 5 ಜನ ಸಿಬ್ಬಂದಿಗಳೊಂದಿಗೆ ಕ್ಯಾಂಪ್ ನಡೆಸುತ್ತಿದ್ದೇವೆ. ಬಹಳ ತ್ರಾಸ ಆಗುತ್ತದೆ. ಆದ್ರೂ ಯಾರೊಬ್ಬರನ್ನು ಹಿಂದಕ್ಕೆ ಕಳುಹಿಸೋದಿಲ್ಲ. ದಾಖಲೆ ಪರಿಶೀಲನೆ ನಡೆಸುವಾಗ ಸರಿಯಾದ ದಾಖಲೆ ಒದಗಿಸಿದರೆ ಕೆಲಸ ಸಲೀಸಾಗಿ ಆಗುತ್ತದೆ. ಕುಂದಾಪುರದಲ್ಲಿ ಆರ್‌ಟಿಓ ಕಚೇರಿ ಆದರೆ ಒಳಿತು. ಇದರಿಂದ ಇಲಾಖೆಗೂ ನಾಗರಿಕರಿಗೂ ಅನುಕೂಲ. 
-ಶ್ರೀಧರ ರಾವ್, ಆರ್‌ಟಿಓ ವೃತ್ತ ನಿರೀಕ್ಷಕ 

ಭಾವಚಿತ್ರ ತೆಗೆಸಲು ಉಡುಪಿಗೆ ಹೋಗಬೇಕು 
       ಲೈಸನ್ಸ್ ಅಗಬೇಕಾದರೆ ಸ್ಮಾರ್ಟ್ ಫೋಟೋ ಕಡ್ಡಾಯ ಆಗಿರುವುದರಿಂದ ಈ ಫೋಟೋ ತೆಗೆಸಿಕೊಳ್ಳಲು ಉಡುಪಿ ಆರ್‌ಟಿಒ ಕಚೇರಿಗೆ ತೆರಳಬೇಕು. ದಾಖಲೆ ಪರಿಶೀಲನೆಗೆ ಕುಂದಾಪುರಕ್ಕೆ ಬರಬೇಕು. ಈ ರಗಳೆಯಿಂದ ದಿನವಿಡಿ ಜನರ ಕೆಲಸ, ಸಮಯ ವ್ಯಯ ಆಗುತ್ತಿದೆ. 
-ಪ್ರಕಾಶ್ ಕುಂದಾಪುರ 

ಸರತಿ ಸಾಲು ಕಂಡಾಗಲೆ ಭಯ ಆಗುತ್ತದೆ 
   ಲೈಸನ್ಸ್ ಮಾಡುವುದಕ್ಕೆ ತೆರಳಿದರೆ ಅಲ್ಲಿನ ಸರತಿ ಸಾಲನ್ನು ನೋಡಿ ಭಯವಾಗುತ್ತದೆ. ಅದರಲ್ಲೂ ಕೆಲವು ದಾಖಲೆ ಸರಿ ಇಲ್ಲದ್ದಿದ್ದಲ್ಲಿ ವಾಪಸ್ ಹೋಗಬೇಕು. ಜನರ ಬವಣೆ ಪರಿಹಾರಕ್ಕೆ ಸರಕಾರ ಮುಂದಾಗಬೇಕು. ಇಂತಹ ವಿಷಯಗಳಲ್ಲಿ ನಿರ್ಲಕ್ಷ್ಯ ಸಲ್ಲ. 
-ಹರೀಶ್ ಮೊಗವೀರ ಸಿದ್ದಾಪುರ


ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com