ರಾಜಕೀಯದಲ್ಲಿ ವೌಲ್ಯ ಕುಸಿಯುತ್ತಿದೆ: ಚಕ್ರವರ್ತಿ ಸೂಲಿಬೆಲೆ

ಕುಂದಾಪುರ: ಲಾಲ್ ಬಹದ್ದೂರ್ ಶಾಸ್ತ್ರೀಯಂತಹ ಮಹಾನ್ ದೇಶಭಕ್ತ ನಾಯಕರನ್ನು ಕೂಡ ಅಪವಾದ ಬಿಟ್ಟಿಲ್ಲ. ಅವರ 
ವಿರುದ್ಧ ತಪ್ಪು ಅಭಿಪ್ರಾಯ ಮೂಡಿದಾಗ ಪತ್ನಿ ಪತ್ರಿಕಾಗೋಷ್ಠಿ ಕರೆದು ಅವರಲ್ಲಿರುವುದು 338 ರೂ. ಮಾತ್ರ. ಅವರು ಯಾವ 
ಭ್ರಷ್ಟಾಚಾರ ವನ್ನೂ ನಡೆಸಿಲ್ಲ ಎಂದು ಹೇಳಬೇಕಾಯಿತು. ಅಂದಿನ ರಾಜಕೀಯದ ಬದ್ಧತೆ ಇಂದು ಕಾಣಲು ಸಾಧ್ಯವಿಲ್ಲ. 
ರಾಜಕೀಯದಲ್ಲಿ ದಿನೇ ದಿನೇ ವೌಲ್ಯ ಕುಸಿಯುತ್ತಿದೆ ಎಂದು ಜಾಗೋ ಭಾರತ್ ಖ್ಯಾತಿಯ ಚಕ್ರವರ್ತಿ ಸೂಲಿಬೆಲೆ ಹೇಳಿದರು. 
   ಇಲ್ಲಿನ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ಇಲ್ಲಿನ ಬಿಜೆಪಿ ಅಭ್ಯರ್ಥಿ ಬಿ. ಕಿಶೋರ್ ಕುಮಾರ್ ಅಭಿಮಾನಿ ಬಳಗ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. 
    ರಾಜಕೀಯದಲ್ಲಿ ಚಳವಳಿ ಆಗಬೇಕಾಗಿದೆ. ಯುವ ಜನಾಂಗ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಬೇಕು. ಇಂದು ಚುನಾವಣೆಗೆ 
ನಿಲ್ಲಬೇಕಾದರೆ ಜಾತಿ, ಹಣ ಬಲ ಮುಂದಿಡುವ ಪರಿಸ್ಥಿತಿ ಎದುರಾಗಿದೆ. ಇದು ದುರಂತ. ಖ್ಯಾತ ಶಿಕ್ಷಣ ತಜ್ಞರೊಬ್ಬರು 
ಚುನಾವಣೆಗೆ ನಿಲ್ಲುತ್ತೇನೆ. ಟಿಕೆಟ್ ಕೊಡಿ ಎಂದು ಕೇಳಿದಾಗ, ನೀವು ಮುಸ್ಲಿಂ ಸಮಾಜದವರು, ನಿಮ್ಮ ಸಂಖ್ಯೆ ಹೆಚ್ಚಿರುವಲ್ಲಿ 
ಚುನಾವಣೆಗೆ ನಿಲ್ಲುವುದಾದರೆ ಟಿಕೆಟ್ ಕೊಡ್ತೀವಿ ಅಂತ ಪಕ್ಷದ ಮುಖಂಡರು ಹೇಳಿದರಂತೆ. ಶಿಕ್ಷಣ ತಜ್ಞರಿಗೆ ಇದು ಹಾಸ್ಯಾಸ್ಪದ 
ಎಂದು ಕಂಡುಬಂದಿದ್ದಲ್ಲದೆ ಟಿಕೆಟ್ ಉಸಾಬರಿ ಬೇಡ ಎಂದು ಸುಮ್ಮನಾದರು. ರಾಜಕೀಯ ಕಲುಷಿತಗೊಂಡಿದ್ದರೂ ಅನೇಕ 
ಪ್ರಾಮಾಣಿಕರು, ಸಜ್ಜನರು ಈ ವ್ಯವಸ್ಥೆಯಲ್ಲಿದ್ದಾರೆ. ವ್ಯವಸ್ಥೆಗೆ ಆವರಿಸಿರುವ ಕಶ್ಮಲ ತೊಳೆಯಬೇಕಾದರೆ ಸಜ್ಜನರು, 
ಪ್ರಾಮಾಣಿಕರು ಹೆಚ್ಚೆಚ್ಚು ರಾಜಕೀಯಕ್ಕೆ ಬರಬೇಕು ಎಂದು ಅವರು ಹೇಳಿದರು. 

ಅಭ್ಯರ್ಥಿ ಬಿ. ಕಿಶೋರ್ ಕುಮಾರ್ ಮಾತನಾಡಿ, ತಾನು ರಾಜಕೀಯದಲ್ಲಿ ಯಾವುದೇ ಆಸೆ-ಆಕಾಂಕ್ಷೆ ಹೊಂದಿದವನಲ್ಲ. ಪಕ್ಷ 
ತನ್ನನ್ನು ಗುರುತಿಸಿ ಈ ಬಾರಿ ಟಿಕೆಟ್ ನೀಡಿದೆ. ನನ್ನ ಚಿಂತನೆಗಳು ರಾಜಕೀಯಕ್ಕೆ ಹೊರತಾಗಿ ಸಾಕಷ್ಟು ಮಹತ್ತಿಕೆ ಪಡೆದುಕೊಂಡಿದೆ. ಸಂಗೀತ, ಕಲೆ, ಸಮಾಜ ಸೇವೆಗೆ ಮೊದಲ ಆದ್ಯತೆ ನೀಡಿದವ. ಉದ್ಯಮ ನಡೆಸುವ ತನಗೆ ಸರಕಾರ 
ಲಕ್ಷಾಂತರ ರೂ. ಸಬ್ಸಿಡಿ ನೀಡಿದಾಗಲೂ ಅದನ್ನು ಸರಕಾರಕ್ಕೆ ಹಿಂದಿರುಗಿಸಿದ್ದೇನೆ. ರಾಜಕೀಯದಲ್ಲಿ ವಿದ್ವೇಷ ದೂರವಾಗಿ 
ಪರಸ್ಪರರನ್ನು ಗೌರವಿಸುವ ವಾತಾವರಣ ಮೂಡಬೇಕು ಎಂದರು. 
ಕಿಶೋರ್ ಅಭಿಮಾನಿ ಬಳಗದ ಸದಾನಂದ ನಾವಡ ಸ್ವಾಗತಿಸಿದರು. ಕಿಶೋರ್ ಸೇವಾ ಮಜಲಿನ ನಾನಾ ಶಾಖೆಗಳ ಹಲವು 
ಗಣ್ಯರು, ನಾಗರಿಕರು, ಸಂಘ ಸಂಸ್ಥೆಯ ಪ್ರಮುಖರು ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com