ಬಿಜೆಪಿ ಕಾರ್‍ಯಕರ್ತರ ಸಮಾವೇಶ; 300ಕ್ಕೂ ಹೆಚ್ಚು ಕಾರ್‍ಯಕರ್ತರ ಸೇರ್ಪಡೆ


ಬೈಂದೂರು: ರಾಜ್ಯದಲ್ಲಿ ಕಳೆದ 5 ವರ್ಷ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭೂತಪೂರ್ವ ಬದಲಾವಣೆ ತರುವುದರ ಮೂಲಕ ಸಮಾಜದ ಕಟ್ಟಕಡೆಯ ಜನರಿಗೆ ಬಿಜೆಪಿ ಸರ್ಕಾರ ನೀಡಿದ ಸೌಲಭ್ಯ ರಾಜ್ಯದ ಇತಿಹಾಸದಲ್ಲಿ ಬೇರೆ ಯಾವ ಪಕ್ಷದ ಅಧಿಕಾರವಧಿಯಲ್ಲಿ ದೊರೆಯಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬಿಜೂರಿನ ಗಾಯಾಡಿಯಲ್ಲಿ ಬಿಜೆಪಿ ಕಾರ್‍ಯಕರ್ತರ ಸಮಾವೇಶ ಮತ್ತು ಸೇರ್ಪಡೆ ಕಾರ್‍ಯಕ್ರಮವನ್ನು ಮಾತನಾಡಿದರು.
     ಸಂಧ್ಯಾ ಸುರಕ್ಷಾ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆ, ಸೈಕಲ್ ವಿತರಣೆ, ಮಡಿಲು ಕಿಟ್, ಅಂತ್ಯ ಸಂಸ್ಕಾರ ನಿಧಿ, ಪ್ರತಿ ಲೀಟರ್ ಹಾಲಿಗೆ 2 ರೂ. ಪ್ರೋತ್ಸಾಹ ಧನ, ರೈತರ ಸಾಲ ಮನ್ನಾ ಯೋಜನೆ, ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ದೇವಾಲಯಗಳ ತಸ್ತಿಕ್‌ನ್ನು 12 ಸಾವಿರದಿಂದ 24 ಸಾವಿರಕ್ಕೆ ಹೆಚ್ಚಿಸಿದ್ದು, ಹೀಗೆ ಹತ್ತಾರು ಯೋಜನೆಗಳ ಮೂಲಕ ಬಡವರ, ದುರ್ಬಲರ, ಅಲ್ಪಸಂಖ್ಯಾತರ, ಅಸಹಾಯಕರ ಬದುಕಿನಲ್ಲಿ ಆಶಾಕಿರಣ ಮೂಡಿಸಿದೆ. ಇಂತಹ ಸರ್ಕಾರ ಯೋಜನೆಗಳನ್ನು ಬಿಜೆಪಿ ಕಾರ್‍ಯಕರ್ತರು ಮತದಾರನ ಮನೆಮನೆಗೆ ತಲುಪಿಸಿ ಅವರಿಂದ ಮತ ಕೇಳಬೇಕೆಂದು ಕರೆ ನೀಡಿದರು.
    ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಸಮಾಜದ ಎಲ್ಲಾ ತರಹದ ವ್ಯವಸ್ಥೆಯಲ್ಲಿ ಸ್ಪಂಧಿಸಬೇಕೆನ್ನುವ ನೆಲೆಯಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಂಡು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಸಲ್ಲಿಸಿ ಸಫಲನಾದ ಹಾಗೆ ರಾಜಕೀಯದಲ್ಲೂ ಸಫಲನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರದ ಜನಪರ ಕಾರ್‍ಯಕ್ರಮಗಳಿಂದ ಕ್ಷೇತ್ರದ ಜನರು ಸರ್ಕಾರದ ಋಣದಲ್ಲಿದ್ದು, ಜನರು ಬಿಜೆಪಿಗೆ ಮತದಾನ ಮಾಡುವುದರ ಮೂಲಕ ಈ ಋಣ ತೀರಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು. ಕ್ಷೇತ್ರ ಬಿಜೆಪಿ ಅಧ್ಯಕ್ಷ ವೈ, ಪ್ರಣಯ ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. 
    ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕೆ. ಬಾಬು ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ಮಾಜಿ ಕ್ಷೇತ್ರಾಧ್ಯಕ್ಷ ಬಿ.ಎಸ್. ಸುರೇಶ ಶೆಟ್ಟಿ, ಬಿಜೆಪಿ ಮುಖಂಡರಾದ ಟಿ. ನಾರಾಯಣ ಹೆಗ್ಡೆ, ಸದಾಶಿವ ಪಡುವರಿ, ಹೆರಿಯಣ್ಣ ಮಾಸ್ಟರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಾನಾ ಪಕ್ಷದ 300ಕ್ಕೂ ಹೆಚ್ಚು ಯುವ ಕಾರ್‍ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಶ್ರೀಧರ ಬಿಜೂರು ಸ್ವಾಗತಿಸಿ, ಗುರುಪ್ರಸಾದ್ ಕಾರ್‍ಯಕ್ರಮ ನಿರೂಪಿಸಿದರು. 

ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com