ಕುಂದಾಪುರ: ಈ ಬಾರಿ ಟಿಕೆಟ್ ಸಿಗಲಿಲ್ಲ ಎಂಬ ಕೊರಗು ನನಲ್ಲಿಲ್ಲ. 18 ವರ್ಷ ಬೈಂದೂರು ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದಿದ್ದೇನೆ. ಎರಡು ಬಾರಿ ಸೋತರೂ ಮೂರನೇ ಬಾರಿ ಪಕ್ಷ ನನಗೆ ಟಿಕೆಟ್ ನೀಡಿ ಶಾಸಕನಾಗಿ ಮಾಡಿದ್ದಕ್ಕೆ ಅಭಾರಿಯಾಗಿದ್ದೇನೆ. ನನಗೀಗ ವಿಶ್ರಾಂತಿ ಬೇಕಾಗಿದೆ ಅನ್ನಿಸುತ್ತಿದೆ ಎಂದು ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ ಭಾವುಕರಾಗಿ ನುಡಿದರು.
ಕೋಟೇಶ್ವರದ ಅವರ ಮನೆ ವಠಾರದಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಏರ್ಪಡಿಸಿದ್ದ ಕೃತಜ್ಞತೆ ಸಭೆಯಲ್ಲಿ ಭಾವುಕರಾಗಿ ಮಾತನಾಡಿದ ಅವರು ನನಗೀಗ ರಾಜಕೀಯವೂ ಇಲ್ಲ, ಉದ್ಯೋಗವೂ ಇಲ್ಲ. ವಯಸ್ಸು ಕೂಡ ಆಗಿದೆ. ಬಾಲ್ಯದಿಂದ ಬಹಳ ಕಷ್ಟಪಟ್ಟು ಬೆಳೆದವನು. ಯಾವತ್ತೂ ಜೀವನದಲ್ಲಿ ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ಕ್ಷೇತ್ರದ ಜನರನ್ನು ಬಂಧುಗಳಂತೆ ಪ್ರೀತಿಸಿದ್ದೇನೆ. ಮೇ ತಿಂಗಳ ತನಕ ನಾನು ಶಾಸಕನಾಗಿರುತ್ತೇನೆ. ಬೈಂದೂರಿನಲ್ಲಿ ತಾನು ಕಿಂಚಿತ್ ಕೆಲಸ ಮಾಡಿದ್ದೇನೆ ಎಂಬ ಕಾರಣಕ್ಕೆ ನನ್ನ ಮನೆ ತನಕ ಬಂದ ಬೈಂದೂರು ಕ್ಷೇತ್ರದ ಸಮಸ್ತ ಕಾರ್ಯಕರ್ತರು, ಮುಖಂಡರಿಗೆ ಸದಾ ಋಣಿಯಾಗಿದ್ದೇನೆ ಎಂದರು.
ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ಜಿ.ಪಂ. ಸದಸ್ಯರಾದ ಗೌರಿ ದೇವಾಡಿಗ, ಇಂದಿರಾ ಶೆಟ್ಟಿ, ತಾ.ಪಂ. ಉಪಾಧ್ಯಕ್ಷೆ ಹೇಮಾವತಿ ಪೂಜಾರಿ, ತಾ.ಪಂ. ಸದಸ್ಯರಾದ ಪ್ರಸನ್ನ ಕುಮಾರ್, ಪಾರ್ವತಿ ಪೂಜಾರ್ತಿ, ಬಿಜೆಪಿ ಮುಖಂಡರಾದ ಪಿ. ಸುಖಾನಂದ ಶೆಟ್ಟಿ, ಬಾಬು ಶೆಟ್ಟಿ ಸೇರಿದಂತೆ ಬೈಂದೂರು ಕ್ಷೇತ್ರದ ಅನೇಕ ಮುಖಂಡರು ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ಕೆ.ಬಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com