ಬೈಂದೂರು: ಗುರುಗಳು ಗಂಗೆಯಾದರೆ, ಶಿಷ್ಯರು ಯಮುನೆ. ದೇವರು ಗುಪ್ತಗಾಮಿಯಾದ ಸರಸ್ವತಿ. ಈ ಮೂವರದು ಪವಿತ್ರ ತ್ರಿವೇಣಿ ಸಂಗಮವಿದ್ದಂತೆ ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಮರವಂತೆಯ ಶ್ರೀರಾಮ ಮಂದಿರದಲ್ಲಿ ಶನಿವಾರದಿಂದ ಆರಂಭವಾಗುವ ಶ್ರೀರಾಮ ಭಜನಾ ಸಪ್ತಾಹದ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನಗೈದರು. ಶಿಷ್ಯ ಗುರುಗಳ ಮೂಲಕ ದೇವರ ಕೃಪೆ ಬಯಸುತ್ತಾನೆ. ಗುರುಗಳು ದೇವರ ಮೂಲಕ ಅದನ್ನು ದೊರಕಿಸಿಕೊಡುತ್ತಾರೆ. ಅ ಮೂಲಕ ಅವರ ನಡುವೆ ಪವಿತ್ರ ಸಂಬಂಧ ಏರ್ಪಡುತ್ತದೆ. ಶ್ರೀರಾಮ ಮತ್ತು ರಾಮಚಂದ್ರಾಪುರ ಮಠದ ಪರಮ ಭಕ್ತರಾದ ಮರವಂತೆಯ ಮೀನುಗಾರರು ಇದನ್ನು ಸಾಧಿಸಿ ತೋರಿಸಿದ್ದಾರೆ. ಅವರ ಬಹುಕಾಲದ ಬೇಡಿಕೆಯಾದ ಮೀನುಗಾರಿಕಾ ಹೊರಬಂದರು ಯೋಜನೆ ಈ ಸಂಬಂಧದ ಮೂಲಕ ಅವರಿಗೆ ದೊರಕಿದೆ ಎಂದು ಅವರು ಹೇಳಿದರು.
ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ಸೋಮಯ್ಯ ಖಾರ್ವಿ ದಂಪತಿ ಗುರುಗಳ ಪಾದಪೂಜೆ ನೆರವೇರಿಸಿದರು. ನಿವೃತ್ತ ಉಪನ್ಯಾಸಕ ಟಿ. ಕೆ. ಖಾರ್ವಿ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಎಂ. ಶಂಕರ ಖಾರ್ವಿ ನಿರೂಪಿಸಿದರು.
ಮರವಂತೆಯಲ್ಲಿ ಆರಂಭವಾಗಲಿರುವ ಮೀನುಗಾರಿಕಾ ಹೊರಬಂದರು ಕಾಮಗಾರಿ ಪ್ರದೇಶಕ್ಕೆ ಶ್ರೀಗಳು ಭೇಟಿ ನೀಡಿದರು. ರಾತ್ರಿ ರಾಮಮಂದಿರದಲ್ಲಿ ಮೊಕ್ಕಾಂ ಮಾಡಿದ ಅವರು ಬೆಳಿಗ್ಗೆ ಶ್ರೀರಾಮ ಭಜನಾ ಸಪ್ತಾಹದ ದೀಪ ಸ್ಥಾಪನೆ ನೆರವೇರಿಸಿ ನಿರ್ಗಮಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com