ಇಲ್ಲಿನ ಮೇರ್ಡಿ ಎಂಬಲ್ಲಿ ಪ್ರಥಮ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಆರೋಗ್ಯ ಸಮಸ್ಯೆಯಿಂದ ಪ್ರಚಾರ ಸ್ವಲ್ಪ ತಡವಾಯಿತು. ತನಗೆ ಮಾಡಿದ ಅನ್ಯಾಯದಿಂದ ರಾಜಕೀಯ ನಿವೃತ್ತಿ ಬಯಸಿದ್ದ ತಾನು ಜನತೆಯ ಇಚ್ಚೆಯಂತೆ ಅವರ ಋಣ ತಿರೀಸಲು ಮತ್ತೆ ಚುನಾವಣೆಗೆ ಸ್ಪರ್ಧಿಸಬೇಕಾಯಿತು ಎಂದರು.
ಸಾಕಷ್ಟು ಚರ್ಚಿಸಿದ್ದೇನೆ: ಸದನದಲ್ಲಿ ಇಲ್ಲಿಯವರೆಗೂ ತಾನು ಮಾತನಾಡಿಲ್ಲ ಎಂಬ ವಿರೋಧಿಗಳ ಆರೋಪಕ್ಕೆ ಅಲ್ಲೆಗೆಳೆದ ಅವರು, ತಾನು ಇಲ್ಲಿಯವರೆಗೆ ಪ್ರಚಾರಕ್ಕೋಸ್ಕರ ಚರ್ಚೆ ಮಾಡದೆ ಜನರ ಸಮಸ್ಯೆಯ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದಕ್ಕೆ ಬೇಕಾದಷ್ಟು ದಾಖಲೆಗಳಿವೆ. ಇರುವ ಕೇವಲ ಎಂಟು ತಿಂಗಳಿಗೋಸ್ಕರ ಮಂತ್ರಿಯಾಗಿ ಮಾಜಿ ಸಚಿವ ಎಂಬ ಪಟ್ಟ ಬೇಕಾಗಿರಲಿಲ್ಲ ಎಂದರು.
ವಕೀಲ ಟಿ.ಬಿ. ಶೆಟ್ಟಿ ಮಾತನಾಡಿ, ದೇಶಕ್ಕೆ ಮಾದರಿ ವ್ಯಕ್ತಿಯಾಗಿರುವ ಅಪರೂಪದ ರಾಜಕಾರಣಿ ಹಾಲಾಡಿ. ಇಂತಹ ಪ್ರಾಮಾಣಿಕ ರಾಜಕಾರಣಿಗೆ ಅನ್ಯಾಯವಾಗಿದೆ ಎಂದರೆ ದೇಶಕ್ಕೆ ಅಪಾಯ ಖಂಡಿತ ಎಂದರು. ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರಾದ ಗಣಪತಿ ಶ್ರೀಯಾನ್, ಪ್ರಕಾಶ್ ಮೆಂಡನ್, ತಾ.ಪಂ. ಸದಸ್ಯರಾದ ಮಂಜು ಬಿಲ್ಲವ, ಭಾಸ್ಕರ್ ಬಿಲ್ಲವ, ಪೂರ್ಣಿಮಾ ಪೂಜಾರಿ, ಜಿ.ಬಿ. ಶೆಟ್ಟಿ ಇದ್ದರು. ಬೆಳ್ವೆ ವಸಂತ ಕುಮಾರ್ ಶೆಟ್ಟಿ ಮಾತನಾಡಿದರು. ಕಿಶನ್ ಕುಮಾರ್ ಹೆಗ್ಡೆ ನಿರೂಪಿಸಿದರು.