ಕುಂದಾಪುರ: ಸಮನ್ವಯತೆಯನ್ನು ಮೈಗೂಡಿಸಿಕೊಂಡು ಸಮುದಾಯವನ್ನು ಸಂಘಟಿಸುವವಲ್ಲಿ ಶ್ರಮಿಸಬೇಕು ಎಂದು ಭಾರ್ಗವ ಬೀಡು ಬಂಟರ ಮಹಾಸಂಸ್ಥಾನದ ಪೀಠಾಧಿಪತಿಗಳಾದ ವಿದ್ಯಾವಾಚಸ್ಪತಿ ಡಾ| ವಿಶ್ವಸಂತೋಷ ಭಾರತಿ ಶ್ರೀಪಾದರು ಹೇಳಿದರು.
ಅವರು ಕುಂದಾಪುರದ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ನಡೆದ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ನಾಯಕತ್ವ ಗುಣವನ್ನು ರಕ್ತಗತವನ್ನಾಗಿಸಿಕೊಂಡ ಬಂಟ ಸಮಾಜ ಧ್ಯೇಯವನ್ನು ಇರಿಸಿಕೊಂಡಲ್ಲಿ ಯಶಸ್ಸು ಸಾಧ್ಯ ಎಂದರು.
ಯುವ ಬಂಟರ ಸಂಘವನ್ನು ಉದ್ಘಾಟಿಸಿದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಕರಾವಳಿಯಲ್ಲಿ ಅನೇಕ ಸಮಾಜಗಳಿದ್ದರೂ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ಬಂಟ ಸಮಾಜ ಅಗ್ರಗಣ್ಯವಾದದು. ಬಂಟರಲ್ಲಿ ಇರುವ ಕಿಚ್ಚು - ನೆಚ್ಚು ಯಾವ ಸಮಾಜದಲ್ಲೂ ಇಲ್ಲ. ನಾವು ಆಡಂಬರ ರಹಿತ ಜೀವನ ನಡೆಸಿ ಇತರರ ಕಷ್ಟ ಸುಖಗಳಿಗೆ ನೆರವಾಗ ಬೇಕಾದ ಅನಿವಾರ್ಯತೆ ಇದೆ ಎಂದರು.
ಕುಂದಾಪುರ ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ಡಾ| ವೈ.ಎಸ್. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಆಶಯ ಮಾತುಗಳನ್ನಾಡಿದರು.
ಉಡುಪಿ ಯುವ ಬಂಟರ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮುಂಬಯಿ ಥಾಣೆ ವರ್ತಕ ನಗರದ ಕನ್ನಡ ಸಂಘದ ಅಧ್ಯಕ್ಷ ರತ್ನಾಕರ ಜಿ. ಶೆಟ್ಟಿ, ಕುಂದಾಪುರ ತಾಲೂಕು ಬಂಟರ ಸಂಘದ ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿ, ಬೈಂದೂರು ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ, ರವೀಂದ್ರನಾಥ ಹೆಗ್ಡೆ, ಕೋಶಾಧಿಕಾರಿ ಸುರೇಶ ಶೆಟ್ಟಿ ಉಪಸ್ಥಿತರಿದ್ದರು.
ಪುರಸ್ಕಾರ ಪ್ರದಾನ
ಸಂಘದ ಉದ್ಘಾಟನಾ ಸಮಾರಂಭದ ಶುಭ ಸಂದರ್ಭದಲ್ಲಿ ವಿವಿಧ ದತ್ತಿ ನಿಧಿಗಳಿಗೆ ಧನ ಸಹಾಯ ನೀಡಿದ ದಾನಿಗಳನ್ನು ಸಮ್ಮಾನಿಸಲಾಯಿತು. ಬಂಟ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮಾಂಗಲ್ಯ ಸೂತ್ರ ದತ್ತಿನಿಧಿ ಪುರಸ್ಕಾರವನ್ನು ನೀಡಲಾಯಿತು. ಡಾ| ವೈ.ಎಸ್. ಹೆಗ್ಡೆ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿದರು.
ಯುವ ಬಂಟರ ಸಂಘದ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಸ್ವಾಗತಿಸಿ, ಗೌರವಾಧ್ಯಕ್ಷ ಅಭಿನಂದನ್ ಶೆಟ್ಟಿ ಪ್ರಸ್ತಾವನೆಗೈದರು. ಸುಕೇಶ್ ಶೆಟ್ಟಿ ಸಂದೇಶ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಉಮೇಶ ಶೆಟ್ಟಿ ಶಾನ್ಕಟ್ಟು ವಂದಿಸಿದರು. ಸಂಘಟನಾ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಮತ್ತು ಶಿಕ್ಷಕ ಸತೀಶ್ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರ್ವಹಿಸಿದರು.
ಉದ್ಘಾಟನೆಗೆ ಮುನ್ನ ಕುಂದೇಶ್ವರ ದೇವಸ್ಥಾನದಿಂದ ವಾಹನ ಮೆರವಣಿಗೆ ನಡೆಯಿತು.
ಕುಂದಾಪ್ರ ಡಾಟ್ ಕಾಂ - editor@kundapra.com