ಬೈಂದೂರು: ನೈತಿಕತೆ ಇಲ್ಲದ ಸಂಸ್ಕಾರರಹಿತ, ಇಷ್ಟು ವರ್ಷಕಾಲ ರಾಜ್ಯದಲ್ಲಿ ನಡೆಯದೇ ಇರುವ ಭೃಷ್ಟಾಚಾರ ಹಗರಣಗಳೇ ತುಂಬಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಪಕ್ಷದ ಕಾರ್ಯಕರ್ತರಿಗೆ ಕರೆನೀಡಿದರು.
ಉಪ್ಪುಂದ ಶಂಕರ ಕಲಾ ಮಂದಿರದಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷೀಯ ಸ್ಥಾನದಿಂದ ಮಾತನಾಡಿದರು. ರಾಜ್ಯದಲ್ಲಿ 47 ಲಕ್ಷ ಪಡಿತರ ಚೀಟಿ ರದ್ದು, ಪರೀಕ್ಷಾ ಸಮಯದಲ್ಲೂ ವಿದ್ಯುತ್ ವ್ಯತ್ಯಯ, ದೇವಾಲಯದಂತಿರುವ ವಿಧಾನಸಭೆಯಲ್ಲಿ ಕುಳಿತು ನೀಲಿಚಿತ್ರ ವೀಕ್ಷಣೆ, ಭೂಕಬಳಿಕೆ, ಮುಖ್ಯಮಂತ್ರಿ ಹಾಗೂ ಕೆಲಸಚಿವರು ಜೈಲುವಾಸ ಮಾಡಿದ್ದೇ ದೊಡ್ಡ ಸಾಧನೆ. ದೂರದೃಷ್ಠಿತ್ವ ಇಲ್ಲದ ಬಿಜೆಪಿ ಸರ್ಕಾರದಿಂದ ರಾಜ್ಯದಲ್ಲಿ ಏನೂ ಅಭಿವೃದ್ಧಿಯಾಗಲಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು. ನಮ್ಮ ಪಕ್ಷದಲ್ಲಿದ್ದು ಎಲ್ಲಾ ರೀತಿಯ ಅಧಿಕಾರ ಅನುಕೂಲವನ್ನು ಪಡೆದು ಈಗ ಬೇರೆ ಪಕ್ಷಕ್ಕೆ ವಲಸೆಹೋಗಿ ಸ್ಪರ್ಧಿಸುತ್ತಿರುವವರನ್ನು ಪಕ್ಷಾಂತರಿ ಜನತೆಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಸುಕುಮಾರ ಶೆಟ್ಟಿ ಹೆಸರು ಹೇಳದೇ ವ್ಯಂಗ್ಯ ಮಾಡಿದರು. ಕಾಂಗ್ರೆಸ್ಗೆ ಅಧಿಕಾರ ಮುಖ್ಯವಲ್ಲ. ಈ ಕ್ಷೇತ್ರದಲ್ಲಿ ಕಳೆದ ಬಾರಿ ಸೋತರೂ ಐದು ವರ್ಷಗಳಿಂದ ಜನರೊಡನೆ ಇದ್ದು ಕಷ್ಟ ಸುಖಗಳಿಗೆ ಸ್ಪಂಧಿಸಿದ್ದೇನೆ. ಸೌಹಾರ್ದ ವಾತಾವರಣ, ಬಲಿಷ್ಠ ಸರ್ಕಾರ ರಚನೆ ಹಾಗೂ ರಾಜ್ಯದಲ್ಲಿ ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡಲು ಕಾಂಗ್ರೆಸ್ಗೆ ಮತನೀಡಿ ಎಂದರು.
ಹಿರಿಯ ಕಾಂಗ್ರೆಸ್ ಮುಖಂಡರುಗಳಾದ ಶ್ರೀಧರ ಪ್ರಭು, ಮಂಜು ದೇವಾಡಿಗ, ಕೃಷ್ಣ ಪೂಜಾರಿ, ಶ್ರೀಮತಿ ಚಂದು ಗಾಣಿಗ, ಶ್ರೀಮತಿ ಲಕ್ಷ್ಮೀ ಸಮಾವೇಶವನ್ನು ಉದ್ಘಾಟಿಸಿದರು. ಬ್ಲಾಕ್ ಅಧ್ಯಕ್ಷ ರಮೇಶ ಗಾಣಿಗ, ಕೆಪಿಸಿಸಿ ಸದಸ್ಯ ಬಿ. ರಘುರಾಮ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ರಾಜು ಪೂಜಾರಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ವಾಸುದೇವ ಯಡಿಯಾಳ, ನಾರಾಯಣ ಅಳ್ವೆಗದ್ದೆ, ಯುವ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ ಸೇರಿದಂತೆ ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕರ್ತರೆಲ್ಲರೂ ಸೇರಿ ಕಾಂಗ್ರೆಸ್ ಬೆಂಬಲಕ್ಕೆ ಹಾಗೂ ಅಭ್ಯರ್ಥಿ ಗೆಲುವಿಗಾಗಿ ಪ್ರತಿಜ್ಞೆ ಸ್ವೀಕರಿಸಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಮದನ್ಕುಮಾರ್ ಪ್ರಾಸ್ತಾವಿಕ ಮಾತನಾಡಿದರು.
ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ. ನಾರಾಯಣ ಖಾರ್ವಿ ಸ್ವಾಗತಿಸಿ, ಕಾರ್ಯದರ್ಶಿ ವೆಂಕಟರಮಣ ಖಾರ್ವಿ ವಂದಿಸಿದರು. ಫಿಶರಿಷ್ ಕಾಲೋನಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com