ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿಯಾಗಿ ಕಾರ್ಮಿಕ ಮುಖಂಡರಾದ ಕೆ.ಶಂಕರ್ ಸ್ಪರ್ಧಿಸಲಿದ್ದಾರೆ ಎಂದು ಸಿಪಿಐ(ಎಂ) ಕ್ಷೇತ್ರ ಸಮಿತಿ ಸಂಚಾಲಕ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಅವರು ಕುಂದಾಪುರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಪಿಐ(ಎಂ) ಅಭ್ಯರ್ಥಿ ಕೆ. ಶಂಕರ್ ಕಳೆದ 42 ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಜನರ ನೋವು-ನಲಿವುಗಳಿಗೆ ಸ್ಪಂದಿಸುತ್ತಿರುವ ಸ್ವಂದಿಸುತ್ತದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ, ಕಾರ್ಮಿಕರ ಪರವಾಗಿ ಹೋರಾಟ ಮಾಡಿರುವ ಇವರನ್ನು ಈ ಬಾರಿ ಗೆಲ್ಲಿಸಬೇಕಾದ ಅನಿವಾರ್ಯತೆ ಇದೆ ಎಂದರು. ಸಿಪಿಐ(ಎಂ) ದುಡಿಯುವ ಜನರ, ಮಧ್ಯಮ ವರ್ಗದ, ರೈತರ, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುವ ಪಕ್ಷವಾಗಿದ್ದು, ಇತ್ತೀಚೆಗೆ ನಿವೇಶನ ರಹಿತರಿಗೆ ನಿವೇಶನ ನೀಡಲು ನಡೆಸಿದ ಹೋರಾಟ, ಪಡಿತರ ಚೀಟಿ ರದ್ದತಿ ವಿರುದ್ಧ ನಡೆದ ಹೋರಾಟಗಳನ್ನು ಗಮನಿಸಬಹುದು. ಹೀಗೆ ಜನಸಾಮಾನ್ಯರಿಗೆ ಸಮಸ್ಯೆ ಎದುರಾದ ಸಂದರ್ಭಗಳಲ್ಲಿ ಹೋರಾಟ ಮಾಡುತ್ತ ಬಂದಿರುವ ಪಕ್ಷವನ್ನು ಈ ಭಾಗದ ಮತದಾರರು ಬೆಂಬಲಿಸಬೇಕಾಗಿದೆ ಎಂದರು.
ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ನಮ್ಮ ಗರಿಷ್ಠ ಸಂಖ್ಯೆಯ ಸದಸ್ಯರು ಇದ್ದಾರೆ. ಈಗಾಗಲೇ ತಾಲೂಕು ಪಂಚಾಯತ್, ಪುರಸಭೆ ಚುನಾವಣೆಗಳಲ್ಲಿ ಪಕ್ಷ ಸ್ಪರ್ಧಿಸಿದೆ. ಗೆಲುವವನ್ನು ಕಂಡಿದೆ ಎಂದು ಹೇಳಿದ ಅವರು, ಭ್ರಷ್ಟಾಚಾರ, ಬೆಲೆ ಏರಿಕೆ ವಿರುದ್ಧ ಮತ್ತು ಕ್ಷೇತ್ರದ ಅಭಿವೃದ್ದಿಗಾಗಿ ಸಿಪಿಐ(ಎಂ) ಅಭ್ಯರ್ಥಿಗೆ ಮತ ನೀಡಬೇಕಾಗಿದೆ ಎಂದರು.
ಭಾರೀ ಶಿಸ್ತಿನ ಬಿಜೆಪಿ ಗುಂಪುಗಾರಿಕೆಯಲ್ಲಿ ಜರ್ಜರಿತಗೊಂಡು ಬಿಜೆಪಿ -ಕೆಜೆಪಿ- ಬಿಎಸ್ಆರ್ ಎಂದು ಮೂರು ಹೋಳಾಗಿವೆ. ಕೇಂದ್ರದಲ್ಲಿ ಜನವಿರೋಧಿ ರಾಜ್ಯಭಾರ ಮಾಡುತ್ತಿರುವ ಮತ್ತು ರಾಜ್ಯದಲ್ಲಿ ವಿರೋಧ ಪಕ್ಷವಾಗಿ ಘೋರವಾಗಿ ವಿಫಲವಾಗಿರುವ ಕಾಂಗ್ರೆಸ್ ಮತ್ತು ಭ್ರಷ್ಟಾಚಾರಕ್ಕಾಗಿ ಜೈಲು ಕಂಡು ಬಂದಿರುವ
ಬಿಜೆಪಿಯನ್ನು ಜನತೆ ರಾಜ್ಯದಿಂದ ತೊಲಗಿಸಲು ಹಾಗೂ ತನ್ನ ಹಕ್ಕುಗಳ ಸಂರಕ್ಷಣೆಗಾಗಿ ಒಗ್ಗೂಡಿ ಹೋರಾಡಲು ಸಿಪಿಎಂನ್ನು ಜನತೆ ಬೆಂಬಲಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ. ಶಂಕರ್, ನಗರ ಸಮಿತಿ ಕಾರ್ಯದರ್ಶಿ ರಮಾನಾಥ್ ಭಂಡಾರಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com