ಕುಂದಾಪುರ: ಶೀಘ್ರದಲ್ಲಿಯೇ ಲೋಕಸಭೆ ಚುನಾವಣೆ ಎದುರಾಗಲಿದೆ. ಕರ್ನಾಟಕದ ಫಲಿತಾಂಶ ದೇಶಕ್ಕೆ ದಿಕ್ಸೂಚಿಯಾಗಲಿದೆ. ದೇಶದ ಭವಿಷ್ಯ ಉಜ್ವಲ ಆಗಬೇಕಾದರೆ ಬಿಜೆಪಿಗೆ ಮತ ನೀಡಿ ಎಂದು ಬಿಜೆಪಿಯ ಯುವ ನೇತಾರ, ಸಂಸದ ವರುಣ್ ಗಾಂಧಿ ಮನವಿ ಮಾಡಿಕೊಂಡರು.
ಶುಕ್ರವಾರ ಸಂಜೆ ಕುಂದಾಪುರದ ಶಾಸ್ತ್ರೀ ವತ್ತದಲ್ಲಿ ಹಮ್ಮಿಕೊಂಡ ಬಿಜೆಪಿ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕೇವಲ 3 ನಿಮಿಷ ಮಾತನಾಡಿದ ಅವರು ನಿಮ್ಮ ಮತ ದೇಶ, ರಾಜ್ಯದ ಹಿತ ಕಾಪಾಡುತ್ತದೆ. ಅಗತ್ಯವಾಗಿ ಎಲ್ಲರೂ ಮತದಾನದಲ್ಲಿ ಭಾಗವಹಿಸಿ ಬಿಜೆಪಿಗೆ ಮತ ನೀಡಿ. ಈ ಕ್ಷೇತ್ರದ ಮಾನ, ಸನ್ಮಾನಕ್ಕಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಅವರು ಮನವಿ ಮಾಡಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಅಭ್ಯರ್ಥಿ ಬಿ.ಕಿಶೋರ್ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಉದಯಕುಮಾರ ಶೆಟ್ಟಿ, ಬಿಜೆಪಿ ವಕ್ತಾರ ಮಟ್ಟಾರು ರತ್ನಾಕರ ಹೆಗ್ಡೆ, ಕ್ಷೇತ್ರ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಕಾವೇರಿ ಉಪಸ್ಥಿತರಿದ್ದರು. ಮಾಲಿನಿ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.
ನಕ್ಸಲ್ ಸಂಕಟ ಪರಿಹಾರಕ್ಕೆ ಹೊಸ ಯೋಜನೆ ತಮ್ಮ ಗುರಿ: ದೇಶವನ್ನು ಕಾಡುವ ನಕ್ಸಲ್ ಸಮಸ್ಯೆ ಪರಿಹಾರ ಮತ್ತು ಯುವ ಜನತೆಗೆ ಉದ್ಯೋಗ ವಿಷಯದಲ್ಲಿ ಬಿಜೆಪಿ ತನ್ನದೇ ಆದ ಹೊಸ ಯೋಜನೆಯನ್ನು ಹಮ್ಮಿಕೊಂಡಿದ್ದು, ಈ ಬಗ್ಗೆ ಪಕ್ಷಾಧ್ಯಕ್ಷ ರಾಜನಾಥ್ ಸಿಂಗ್ ಅವರಲ್ಲಿ ಈಗಾಗಲೇ ಚರ್ಚಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸ ಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ವರುಣ್ ಗಾಂಧಿ ಹೇಳಿದರು.
ಕುಂದಾಪ್ರ ಡಾಟ್ ಕಾಂ - editor@kundapra.com