ಕುಂದಾಪುರ ವಾಜಪೇಯಿಗೆ ಎದುರಾಳಿ ಸಿಗುತ್ತಿಲ್ಲವಂತೆ

ಕುಂದಾಪುರ: ವಿಧಾನಸಭೆ ಚುನಾವಣೆಯಲ್ಲಿ ಕುಂದಾಪುರ ಗೆಲ್ಲುವುದು ಬಿಜೆಪಿಯ ಪರಮ ಗುರಿ ಎಂದರೂ ತಪ್ಪಾಗಲಾರದು. ಹ್ಯಾಟ್ರಿಕ್ ವಿಜೇತ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸಲು ಬಿಜೆಪಿಗೂ ಆಗುತ್ತಿಲ್ಲ. ಇಬ್ಬರ ಜಗಳದ ನಡುವೆ ಲಾಭ ಪಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್ ಗೂ ಆಗುತ್ತಿಲ್ಲ. ಕಳೆದ ಜುಲೈ ತಿಂಗಳಿನಲ್ಲೇ ಬಿಜೆಪಿ ಸಖ್ಯ ಕಳೆದಕೊಂಡ 'ಕುಂದಾಪುರ ವಾಜಪೇಯಿ' ಹಾಲಾಡಿ ಅವರ ಜನಪ್ರಿಯತೆ ಇನ್ನೂ ಕುಗ್ಗಿಲ್ಲ. ಬಿಜೆಪಿ ಮೇಲಿನ ಕೋಪಕ್ಕೆ ಇತರೆ ಪಕ್ಷದ ಟಿಕೆಟ್ ಪಡೆದು ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿದ್ದು ನಿಜ. ಆದರೆ, ಯಾವುದೇ ಪ್ರಮುಖ ಪಕ್ಷಗಳ ಉಸಾಬರಿ ಬೇಡ, ಸ್ವತಂತವಾಗಿ ಸ್ಪರ್ಧಿಸುತ್ತೇನೆ ಎಂದು ಶೆಟ್ಟಿ ಅವರು ಘೋಷಿಸಿದ್ದಾರೆ. ರಾಜ್ಯ ಸಂಪುಟ ವಿಸ್ತರಣೆಯ ಸಂದರ್ಭ ತನ್ನನ್ನು ಕಡೆಗಣಿಸಿದ್ದ ರಿಂದ ಅಸಮಾಧಾನಗೊಂಡು ಶಾಸಕ ಸ್ಥಾನ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಕುಂದಾಪುರದ ಮಾಜಿ ಶಾಸಕರ ಪರ ಕ್ಷೇತ್ರದ ಜನತೆ ನಿಂತಿದ್ದಾರೆ. 'ಬಿಜೆಪಿಯೊಂದಿಗೆ ಯಾವುದೇ ಸಂಬಂಧ ಇರಿಸಿಕೊಳ್ಳುವ ಇರಾದೆ ತನಗಿಲ್ಲ. ತಾನು ಸ್ವತಂತ್ರವಾಗಿ ಸ್ಪರ್ಧಿಸಿ ಜಯಿಸುವ ವಿಶ್ವಾಸವಿದೆ. ನೀವು ಯಾರನ್ನು ಬೆಂಬಲಿ ಸುತ್ತೀರಿ ಎನ್ನುವುದು ನಿಮಗೆ ಬಿಟ್ಟದ್ದು, ನಾನೇನು ಒತ್ತಾಯಿಸುವುದಿಲ್ಲ' ಎಂದು ಹಾಲಾಡಿ ಅವರು ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ. ಸದ್ಯ ಹಾಲಾಡಿ ಅವರಿಗೆ ಸ್ವಲ್ಪ ಹುಷಾರು ತಪ್ಪಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ನಡುವೆ ಹಾಲಾಡಿ ಅವರ ವಿರುದ್ಧ ಗೆಲುವು ಸಾಧಿಸಲು ಬಿಜೆಪಿ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷ ಯಾವುದೇ ಪ್ರಮುಖ ಮುಖಂಡರನ್ನು ಇಳಿಸದಿರಲು ನಿರ್ಧರಿಸಿದೆ. ಹಾಲಾಡಿ ಅವರ ವಿರುದ್ಧ ಯಾರೇ ನಿಲ್ಲಲಿ ಸೋಲು ಕಟ್ಟಿಟ್ಟ ಬುತ್ತಿ ಎಂಬ ಅರಿವು ಬಿಜೆಪಿಗಿಂತ ಮುಂಚಿತವಾಗಿ ಕಾಂಗ್ರೆಸ್ ಗೆ ಆಗಿದೆ. 1999ರಲ್ಲಿ ರಾಜಕೀಯ ಜೀವನ ಆರಂಭಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಾಂಗ್ರೆಸ್ ಪ್ರಭಾವಿ ನಾಯಕ ಪ್ರತಾಪಚಂದ್ರ ಶೆಟ್ಟಿ ಅವರನ್ನು ಸೋಲಿಸಿದರು. 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ಶೆಟ್ಟಿ ಅವರನ್ನು ಹಾಗೂ 2008ರನ್ನು ಕೆ ಜಯಪ್ರಕಾಶ್ ಹೆಗ್ಡೆ ಅವರನ್ನು 25,083 ಅಂತರದಿಂದ ಸೋಲಿಸಿ ಹ್ಯಾಟ್ರೆಕ್ ಸಾಧಿಸಿದರು. ಹಾಲಾಡಿ ಅವರು 1,24,716 ಮತ ಗಳಿಸಿದ್ದರು. ಹಾಲಾಡಿ ಅವರ ಶಕ್ತಿ, ಜನ ಮನ್ನಣೆ ಗಮಸಿರುವ ಪ್ರಮುಖ ಪಕ್ಷಗಳು ಸೂಕ್ತ ಅಭ್ಯರ್ಥಿ ನಿಲ್ಲಿಸಲು ಆಗದೆ ಪರದಾಡುತ್ತಿದೆ. ಕ್ಷೇತ್ರದಲ್ಲಿ ಹಾಲಾಡಿ ಅಲೆ ತೇಲುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ತೆರೆಮರೆ ಮೈತ್ರಿ ಮಾಡಿಕೊಂಡು ಒಟ್ಟಿಗೆ ಒಬ್ಬ ಅಭ್ಯರ್ಥಿಯನ್ನು ನಿಲ್ಲಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com