ಬೈಂದೂರು: ಚುನಾವಣಾ ಆಯೋಗ ಅಧಿಕೃತ ದಿನಾಂಕವನ್ನು ಘೋಷಿಸುವ ಮೂಲಕ ತೆರೆಮರೆಯಲ್ಲಿ ನಡೆಯುತ್ತಿದ್ದ ಚುನಾವಣಾ ತಯಾರಿ ಜೋರಾಗಿದೆ. ಕಳೆದ ಹಲವು ವರ್ಷಗಳ ಇತಿಹಾಸವನ್ನು ಅವಲೋಕಿಸಿದಾಗ ಬೈಂದೂರು ಕ್ಷೇತ್ರದ ಮಟ್ಟಿಗೆ ಈ ಬಾರಿಯ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ನೂತನ ತಾಲೂಕು ಘೋಷಣೆಯಾದ ಬಳಿಕ ಕ್ಷೇತ್ರದ ವರ್ಚಸ್ಸು ವೃದ್ಧಿಸಿರುವ ಜೊತೆಗೆ ರಾಜಕೀಯ ವ್ಯತ್ಯಯಗಳ ಪೂರ್ಣ ಲೆಕ್ಕಾಚಾರದ ಪಕ್ಕಾ ತಯಾರಿಗೊಂದು ಸವಾಲಾಗಿ ಪರಿಣಮಿಸಿದೆ.
ಪ್ರಮುಖ ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಬಲ ಪೈಪೋಟಿ ಸಹಜವಾಗಿದೆ. ಕಾಂಗ್ರೆಸ್ ನಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅಧಿಕೃತ ಅಭ್ಯರ್ಥಿಯೆನ್ನುವ ಲೆಕ್ಕಾಚಾರದಲ್ಲಿ ಚುನಾವಣಾ ಸಿದ್ಧತೆ ಪ್ರಾರಂಭಗೊಂಡಿದೆ. ಬಿ.ಜೆ.ಪಿ. ಪಕ್ಷದಲ್ಲಿ ಈಗಾಗಲೇ ಹಾಲಿ ಶಾಸಕ ಕೆ. ಲಕ್ಷ್ಮೀನಾರಾಯಣ, ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಶೆಟ್ಟಿ, ಉದ್ಯಮಿ ಸುಖಾನಂದ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಸುಕುಮಾರ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ಈಗಾಗಲೇ ಟಿಕೆಟ್ ಗಾಗಿ ಪ್ರಬಲ ಪೈಪೋಟಿ ತೆರೆಮರೆಯಲ್ಲಿ ನಡೆಯುತ್ತಿದೆ. ಬಿ.ಜೆ.ಪಿ.ಗೆ ಅಧಿಪತ್ಯ ಉಳಿಸಿಕೊಳ್ಳುವ ತವಕವಾದರೆ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಅಧಿಕಾರ ಗಳಿಸುವ ಜವಾಬ್ದಾರಿಯಿದೆ. ಈ ನಡುವೆ ಜೆ.ಡಿ. ಎಸ್., ಬಿ.ಎಸ್.ಆರ್., ಕಾಂಗ್ರೆಸ್ ಪಕ್ಷದ ಜೊತೆಗೆ ಕೆ.ಜೆ.ಪಿ ಯು ಸಹ ನಿರ್ಣಾಯಕವಾಗಿದೆ. ಕಾರಣವೆಂದರೆ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರರ ಲೋಕಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಅತ್ಯಧಿಕ ಮತಗಳು ದೊರೆತಿತ್ತು. ಮಾತ್ರವಲ್ಲದೇ ಬೈಂದೂರು ಕ್ಷೇತ್ರದ ಪ್ರಮುಖ ನಾಯಕರುಗಳ ಜೊತೆ ಉತ್ತಮ ಬಾಂಧವ್ಯವಿರುವ ಹಿನ್ನೆಲೆಯಲ್ಲಿ ಕೆ.ಜೆ.ಪಿ. ಪಕ್ಷದ ಅಭ್ಯರ್ಥಿಯು ಸಹ ಬೈಂದೂರಿನಲ್ಲಿ ನಿರೀಕ್ಷೆ ಮೂಡಿಸಲಿದ್ದಾರೆ.
ಈ ಬಾರಿ ಒಟ್ಟು 1,90,937 ಮತದಾರರಿದ್ದು 89162 ಪುರುಷ ಹಾಗೂ 1,01,775 ಮಹಿಳೆಯರಿದ್ದಾರೆ. ಬೈಂದೂರಿನ 26 ಹೋಬಳಿ ವಂಡ್ಸೆಯ 39 ಹೋಬಳಿಗಳು ಒಟ್ಟು 65 ಗ್ರಾಮ, ಈ ವರ್ಷ 24 ಹೆಚ್ಚುವರಿ ಮತಗಟ್ಟೆ ಸೇರಿದಂತೆ ಒಟ್ಟು 240 ಮತಗಟ್ಟೆಗಳಿವೆ. ಶಂಕರನಾರಾಯಣ, ಸಿದ್ಧಾಪುರ, ಹೊಸಂಗಡಿ, ಹಳ್ಳಿಹೊಳೆ, ಕೊಲ್ಲೂರು, ಜಡ್ಕಲ್, ಗೋಳಿಹೊಳೆ, ಬೈಂದೂರು, ಶಿರೂರು, ಗಂಗೊಳ್ಳಿ, ತಲ್ಲೂರು, ಹಟ್ಟಿಯಂಗಡಿ, ನೇರಳಕಟ್ಟೆ, ಕುರ್ಕುಂಜೆ, ಆಜ್ರಿ ಪ್ರಮುಖ ಗ್ರಾಮ ಪಂಚಾಯತ್ ಗಳಾಗಿವೆ.
ಜಿಲ್ಲೆಯ ಅತ್ಯಧಿಕ ಮತದಾರರನ್ನು ಹೊಂದಿದ ಕ್ಷೇತ್ರವಾಗಿದೆ. ಕಳೆದ ಚುನಾವಣೆ ಹೊರತುಪಡಿಸಿದರೆ ಬೈಂದೂರು ಕಾಂಗ್ರೆಸ್ ನ ಭದ್ರಕೋಟೆಯಾಗಿದೆ. ಯಡ್ತರೆ ಮಂಜಯ್ಯ ಶೆಟ್ಟಿ, ಎ.ಜಿ. ಕೊಡ್ಗಿ, ಜನತಾದಳದಿಂದ ಬಿ. ಅಪ್ಪಣ್ಣ ಹೆಗ್ಡೆ, ಬಿ.ಜೆ.ಪಿ. ಯಿಂದ ಮಾಜಿ ಸಂಸದ ಐ.ಎಮ್.ಜಯರಾಮ ಶೆಟ್ಟಿ, ಕೆ. ಲಕ್ಷ್ಮೀನಾರಾಯಣ ಆರಿಸಿ ಬಂದಿದ್ದಾರೆ.
ಅರುಣ್
ಕುಂದಾಪ್ರ ಡಾಟ್ ಕಾಂ - editor@kundapra.com