ಅನಿಯಮಿತ ಲೋಡ್ ಶೆಡ್ಡಿಂಗ್; ಪ್ರತಿಭಟನೆ

ಬೈಂದೂರು: ಅನಿಯಮಿತ ವಿದ್ಯುತ್ ವೈಫಲ್ಯದ ವಿರುದ್ಧ  ಕುಂದಾಪುರ ತಾಲೂಕು  ರೈತಸಂಘ  ಬೈಂದೂರು ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ  ನಡೆಸಿತು.
    ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ರೈತಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ತಾಲೂಕು ಕೇಂದ್ರವಾಗಿ ಘೋಷಣೆಯಾದ ಬೈಂದೂರು ವ್ಯಾಪ್ತಿಯಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ನಿಂದಾಗಿ ಗ್ರಾಹಕರು ಅತಂತ್ರರಾಗಿದ್ದಾರೆ. ಒಂದೆಡೆ ಕೃಷಿಗೆ ಸೂಕ್ತ ಸಮಯದಲ್ಲಿ ನೀರು ಸರಬರಾಜು ಮಾಡಲಾಗುತ್ತಿಲ್ಲ. ವಿದ್ಯಾರ್ಥಿಗಳು, ಸಣ್ಣ ಉದ್ಯಮಿದಾರರ ಪರಿಸ್ಥಿತಿ ಹೇಳತೀರದಾಗಿದೆ. ಉಡುಪಿ ಜಿಲ್ಲೆಯಲ್ಲಿ ವಾರಾಹಿ ಜಲವಿದ್ಯುತ್ ಸ್ಥಾವರ, ಪಡುಬಿದ್ರಿಯ ಎಲ್ಲೂರಿನ ಕಲ್ಲಿದ್ದಲು ಆಧರಿತ ಉಷ್ಣವಿದ್ಯುತ್ ಸ್ಥಾವರಗಳಿದ್ದರೂ ಸಹ ಜಿಲ್ಲೆಯ ಜನತೆಗೆ ವಿದ್ಯುತ್ ದೊರೆಯದಿರುವುದು ಖಂಡನೀಯ. ಮೆಸ್ಕಾಂ ವಿದ್ಯುತ್ ನ್ನು ಅನ್ಯರಾಜ್ಯಗಳಿಗೆ ಒಳಒಪ್ಪಂದದ ಮೂಲಕ ನೀಡುವ ಹುನ್ನಾರ ನಡೆಸುತ್ತದೆ ಎಂದರು.
     ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಹಾಯಕ ಕಾರ್ಯನಿರ್ವಹಣಾ ಇಂಜಿನೀಯರ್ ಸಿದ್ದೇಶ ಮಾತನಾಡಿ ಈಗಾಗಲೇ ಪ್ರತಿದಿನ 14 ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆಯಿದೆ. ಆದರೆ ಕೇವಲ 6 ಮೆಗಾವ್ಯಾಟ್ ವಿದ್ಯುತ್ ಮಾತ್ರ ಸರಬರಾಜಾಗುತ್ತಿದೆ. ಹೀಗಾಗಿ ವಿದ್ಯುತ್ ಕಡಿತಗೊಳಿಸುವುದು ಅನಿವಾರ್ಯವಾಗಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು. ಆದರೆ ಪ್ರತಿಭಟನಾ ನಿರತರು ಮೇಲಾಧಿಕಾರಿಗಳೇ ಬಂದು ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿದರು. ಹೀಗಾಗಿ ಅಪರಾಹ್ನದ ವೇಳೆಗೆ ಆಗಮಿಸಿದ ಮುಖ್ಯ ಕಾರ್ಯನಿರ್ವಹಣಾ ಇಂಜಿನೀಯರ್ ಮಹದೇವಪ್ಪ ಬೇಸಿಗೆಯಲ್ಲಿ ವಿದ್ಯುತ್ ಕಡಿತ ಸಾಮಾನ್ಯವಾಗಿದೆ ಆದರೆ ಒಂದು ವಾರದಲ್ಲಿ ನಿಗದಿತ ಸಮಯವನ್ನು ನಿಗದಿಪಡಿಸಿ ಮುಂಚಿತವಾಗಿ ತಿಳಿಸುವ ಭರವಸೆ ನೀಡಿದರು. 
       ಈ ಸಂದರ್ಭದಲ್ಲಿ ರೈತಸಂಘದ ಉಪಾಧ್ಯಕ್ಷ ವಸಂತ ಹೆಗ್ಡೆ, ಯಡ್ತರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ ಪೂಜಾರಿ, ಮಧುಕರ ಶೇಟ್, ಸುಬ್ರಹ್ಮಣ್ಯ ಪೂಜಾರಿ, ಫಯಾಸ್ ಮುಂತಾದವರು ನೇತೃತ್ವ ವಹಿಸಿದ್ದರು. ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com