ಕಂಬದಕೋಣೆ: ತೆಂಕಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಮಾರ್ಚ್ 31ರಂದು ನಿವೃತ್ತರಾಗಲಿರುವ ಶಿಕ್ಷಕ ಪರಮೇಶ್ವರ ಗಾಣಿಗ ಅವರನ್ನು ಕಂಬದಕೋಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರಗಿದ ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯ ಸಮಾಲೋಚನಾ ಸಭೆಯಲ್ಲಿ ಸನ್ಮಾನಿಸಲಾಯಿತು.
ಮೆಟ್ಟಿನಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಜಿ. ನಾರಾಯಣ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಕಂಬದಕೋಣೆ ಪದವಿಪೂರ್ವ ಕಾಲೇಜಿನ ನಿವೃತ್ತ ಅಧ್ಯಾಪಕ ಸೂಲಿಯಣ್ಣ ಶೆಟ್ಟಿ, ಶಿಕ್ಷಣ ಸಂಯೋಜಕ ರಾಮು ಶೆಟ್ಟಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುನಾಥ ದೇವಾಡಿಗ, ಕಾಲ್ತೋಡು ಶಾಲಾ ಮುಖ್ಯಶಿಕ್ಷಕ ಎಚ್. ಶಂಕರ್, ಕಂಬದಕೋಣೆ ಶಾಲಾ ಮುಖ್ಯಶಿಕ್ಷಕ ಗಂಗಾಧರ ಬಂಟ್, ಹೇರಂಜಾಲು ಶಾಲಾ ಮುಖ್ಯಶಿಕ್ಷಕ ಪ್ರಭಾಕರ ಮೇರ್ಟ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕರಿಗಾಗಿ ಏರ್ಪಡಿಸಲಾದ ಭಾವಗೀತೆ, ಜನಪದ ಗೀತೆ, ಆಶುಭಾಷಣ, ಏಕಪಾತ್ರಾಭಿನಯ ಮೊದಲಾದ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
ಚಪ್ಪರಿಕೆ ಶಾಲಾ ಸಹಶಿಕ್ಷಕ ಶೇಖರ ಗಾಣಿಗ ಸ್ವಾಗತಿಸಿದರು. ಪಾಯನಾಡಿ ಶಾಲಾ ಮುಖ್ಯಶಿಕ್ಷಕ ದಿನೇಶ್ ಮಯ್ಯ ಸ್ಫರ್ಧಾವಿಜೇತರ ಪಟ್ಟಿಯನ್ನು ವಾಚಿಸಿದರು. ಕಂಬದಕೋಣೆ ಸಮೂಹ ಸಂಪನ್ಮೂಲ ವ್ಯಕ್ತಿ ಜಯಾನಂದ ಪಟಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ವಿನಾಯಕ ಮೇರ್ಟ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com