ಕುಂದಾಪುರ: ತಾಲೂಕಿನಾದ್ಯಂತ ಸುಮಾರು ಏಳೂವರೆ ಸಾವಿರ ಪಡಿತರ ಚೀಟಿಗಳನ್ನು ರದ್ಧು ಪಡಿಸಿರುವುದನ್ನು ವಿರೋಧಿಸಿ ಸಿಪಿಐ(ಎಂ) ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಗುರುವಾರ ಕುಂದಾಪುರ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ತಾಲೂಕಿನಾದ್ಯಂತ ಎಪಿಎಲ್, ಬಿಪಿಎಲ್, ಅಂತ್ಯೋದಯ ಸೇರಿದಂತೆ ಸುಮಾರು 7000ಕ್ಕೂ ಹೆಚ್ಚು ಪಡಿತರ ಚೀಟಿಯನ್ನು ಸರಕಾರ ರದ್ಧುಪಡಿಸಿದ್ದು , ಸಾವಿರಾರು ಬಡ ಕುಟುಂಬಗಳಿಗೆ ಅನ್ಯಾಯ ಮಾಡಲಾಗಿದೆ. ಪಡಿತರ ಚೀಟಿ ತಡೆ ಹಾಗೂ ರದ್ಧುಪಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ತಡೆಹಿಡಿದ ಪಡಿತರ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿ ಮೂಲಕ ವಿತರಣೆ ಮಾಡಬೇಕು. ವಾಸದ ಮನೆ ವಿದ್ಯುತ್ ಮೀಟರ್ ಆರ್.ಆರ್. ನಂಬ್ರ, ಮನೆ ಕಟ್ಟಡ ಸಂಖ್ಯೆ ಇತ್ಯಾದಿ ದಾಖಲೆಗಳನ್ನು ಹಾಜರುಪಡಿಸಲು ಕಾಲಾವಕಾಶ ವಿಸ್ತರಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಪ್ರತಿಭಟನಾಕಾರರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಿಗೆ ತಹಸೀಲ್ದಾರ್ ಕಛೇರಿಯ ಮೂಲಕ ಕಳುಹಿಸಲಾಯಿತು.
ಸಿಪಿಐ(ಎಂ) ಕುಂದಾಪುರ ಮುಖಂಡರಾದ ರಾಜೀವ ಪಡುಕೋಣೆ, ಮಹಾಬಲ ವಿ., ವೆಂಕಟೆಶ್ ಕೋಣಿ, ವಿ. ನರಸಿಂಹ, ಸುರೇಶ್ ಕಲ್ಲಾಗರ, ಶಶಿಕಲಾ, ಹೆಚ್. ನರಸಿಂಹ, ಸುಬ್ರಹ್ಮಣ್ಯ ಆಚಾರ್, ಕರಿಯ ದೇವಾಡಿಗ, ನಾಗರತ್ನ, ಗುಣರತ್ನ ಹಾಗೂ ಕಲಾವತಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com