ಜ್ಞಾನ ಸರ್ವಶ್ರೇಷ್ಠ ಶಕ್ತಿ: ಮಂಗೇಶ್ ಶೆಣೈ
ಪ್ರತಿಯೊಬ್ಬರೂ ದಿವ್ಯಾತ್ಮರಾಗಿದ್ದಾರೆ. ಆದರೂ ಒಬ್ಬೊಬ್ಬರಲ್ಲಿಯೂ ಒಂದೊಂದು ಬಗೆಯ ಭಿನ್ನತೆಯನ್ನು ಕಾಣುತ್ತೇವೆ. ಅದಕ್ಕೆ ಕಾರಣವೆಂದರೆ ಶ್ರದ್ಧೆ, ಮಾನಸಿಕ ಏಕಾಗ್ರತೆ ಹಾಗೂ ಪ್ರಯತ್ನದ ಕೊರತೆಯೇ ಆಗಿದೆ. ಪ್ರತಿಯೊಬ್ಬರೂ ತಮ್ಮೊಳಗಿರುವ ದಿವ್ಯತೆಯನ್ನು ಸೂಕ್ತರೀತಿಯಲ್ಲಿ ಪ್ರಕಟಗೊಳಿಸಿದಲ್ಲಿ ಅದ್ಭುತವಾದ ಸಾಧನೆಯನ್ನು ಮಾಡಬಹುದು. ಶ್ರದ್ಧೆ ಮತ್ತು ಮಾನಸಿಕ ಏಕಾಗ್ರತೆಯಿಂದ ಸರ್ವಶ್ರೇಷ್ಠವಾದ ಶಕ್ತಿಯಾದ ಜ್ಞಾನವನ್ನು ಸಂಪಾದಿಸಲು ಸಾಧ್ಯ ಎಂದು ಯಳಜಿತ್ನ ಶ್ರೀ ಸಿದ್ಧಿವಿನಾಯಕ ಸಾಂಸ್ಕøತಿಕ ಕೇಂದ್ರದ ಸಂಚಾಲಕ ವೈ. ಮಂಗೇಶ್ ಶೆಣೈ ಅವರು ಹೇಳಿದರು.
ಸ್ವಾಮಿ ವಿವೇಕಾನಂದರ 150ನೇ ಜನ್ಮಜಯಂತಿ ವರ್ಷಾಚರಣೆಯ ಅಂಗವಾಗಿ ನಾವುಂದ-ಕಿರಿಮಂಜೇಶ್ವರದ ಶುಭದಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಗುರುವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಕಿವಿಮಾತು ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಮುಖ್ಯಶಿಕ್ಷಕ ಮಹದೇವ ಜಿ. ಬನಾವಳಿಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಸಂದೇಶಗಳು ಅತ್ಯಂತ ಪ್ರಸ್ತುತ. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಕುರಿತು ಹೆಚ್ಚಿನ ಅಧ್ಯಯನ ನಡೆಸುವಂತಾಗಬೇಕು ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಗೋವಿಂದರಾಜು ಸ್ವಾಗತಿಸಿದರು. ಕಾರ್ಯಕ್ರಮದ ನಿರ್ದೇಶಕ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಗೋವಿಂದರಾಜು ವಂದಿಸಿದರು. ಉಪನ್ಯಾಸದ ಬಳಿಕ ಸ್ವಾಮಿ ವಿವೇಕಾನಂದರ ಜೀವನತತ್ವ ಸಂದೇಶಗಳ ಕುರಿತ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಲಾಯಿತು.
ಕುಂದಾಪ್ರ ಡಾಟ್ ಕಾಂ - editor@kundapra.com