ಕುಂದಾಪುರ: ಈ ಬಾರಿ ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ಇರುವುದರಿಂದ ನಮ್ಮ ಪಕ್ಷ ಬಹುಮತ ಪಡೆದು ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದು ಕುಣಿಗಲ್ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಪಿ. ಬಿ. ರಾಮಸ್ವಾಮಿ ಗೌಡ ಹೇಳಿದರು.
ಕುಟುಂಬಸಮೇತರಾಗಿ ಶ್ರೀ ಕ್ಷೇತ್ರ ಕೊಲ್ಲೂರಿಗೆ ಆಗಮಿಸಿ ಸನ್ನಿಧಿಯಲ್ಲಿ ಚಂಡಿಕಾಹೋಮ ನೆರವೇರಿಸಿ ಬಳಿಕ ಮಾತನಾಡಿದರು. ಈ ಬಾರಿಯೂ ಕುಣಿಗಲ್ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದು, ದೇವಿಯ ಅನುಗ್ರಹ ಪಡೆಯಲು ಸ್ವಪತ್ನಿಸಮೇತ ಆಗಮಿಸಿದ್ದಾಗಿ ಹೇಳಿದರಲ್ಲದೇ ಜನ ಮೋಸಮಾಡಿಯಾರು ಆದರೆ ದೇವರು ನಂಬಿ ಬಂದ ಭಕ್ತರ ಕೈ ಬಿಡಲಾರ ಎಂಬ ನಂಬಿಕೆಯುಳ್ಳ ನಾನು ಯಾವಾಗಲೂ ಬರುತ್ತಿರುತ್ತೇನೆ ಎಂದರು.
ಕೆಜೆಪಿ, ಬಿಜೆಪಿ ಪಕ್ಷಗಳು ಬೆಂಗಳೂರು ಗ್ರಾಮಾಂತರ, ಮಂಡ್ಯ, ತುಮಕೂರು ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿರದ ಕಾರಣ ಅಲ್ಲದೇ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸರಿಸಮಾನವಾಗಿರುವುದರಿಂದ ಜೆಡಿಎಸ್-ಕಾಂಗ್ರೆಸ್ಗೆ ನೇರ ಸ್ಪರ್ಧೆ ನಡೆಯಲಿದೆ.
ಎಡಯುರು ಸಿದ್ಧಲಿಂಗೇಶ್ವರ ದೇವಸ್ಥಾನವನ್ನು ಅಂದಿನ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ನಂತರ ಬಂದ ಬಿ.ಎಸ್.ವೈ. ಗದುಗಿನ ತೊಂಟದಾರ್ಯ ಮಠದ ಡಂಬಾಲಸ್ವಾಮಿಗೆ ಪರಭಾರೆ ಮಾಡುವ ಪ್ರಯತ್ನವನ್ನೂ ನಾನು ಏಕಾಂಗಿಯಾಗಿ ಹೋರಾಟ ಪ್ರಾರಂಭಿಸಿ ನಂತರ ಜನರ ಸಹಕಾರದಿಂದ ತಡೆದಿದ್ದು ಈಗ ಮುಜರಾಯಿ ಇಲಾಖೆಯು ಈ ಕ್ಷೇತ್ರದ ಚಿತ್ರಣವನ್ನೇ ಬದಲಿಸಿ ಹೆಚ್ಚು ಹೆಚ್ಚು ಭಕ್ತ ಜನರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ಸದಸ್ಯ ಜಯಾನಂದ ಹೋಬಳಿದಾರ್ ಮತ್ತು ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ - editor@kundapra.com