ಕುಂದಾಪುರ: ವೇತನ ಪಾವತಿ ವಿಳಂಬ ವಿರೋಧಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಗುರುವಾರ ತರಗತಿಗಳನ್ನು ಬಹಿಷ್ಕರಿಸಲಾಯಿತು. ದ.ಕ, ಕೊಡಗು, ಉಡುಪಿ ಅತಿಥಿ ಉಪನ್ಯಾಸಕರ ಪದಾಧಿಕಾರಿಗಳು ಮಂಗಳೂರಿನ ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕರನ್ನು ಬೇಟಿ ಮಾಡಿ ಮಾತುಕತೆ ನಡೆಸಿ, ಶೀಘ್ರ ವೇತನ ಬಿಡುಗಡೆಗೊಳಿಸದಿದ್ದಲ್ಲಿ ಮುಂದೆ ನಡೆಯುವ ಮಂಗಳೂರು ವಿವಿ ಪರೀಕ್ಷಾ ಕರ್ತವ್ಯ ಹಾಗೂ ಮೌಲ್ಯಮಾಪನವನ್ನು ಬಹಿಷ್ಕರಿಲಾಗುವುದೆಂಬ ಮನವಿಯನ್ನು ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಕಮಿಷನರ್ಗೆ ಪ್ಯಾಕ್ಸ್ ಸಂದೇಶ ಕಳುಹಿಸಲಾಯಿತು.
ಈ ಹಿಂದೆ ಶೀಘ್ರ ವೇತನ ಬಿಡುಗಡೆಗೊಳಿಸುವಂತೆ ಉನ್ನತ ಶಿಕ್ಷಣ ಸಚಿವರು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದು, ಮಾತುಕತೆ ಕೂಡ ನಡೆಸಲಾಗಿತ್ತು. 20 ದಿನದೊಳಗೆ ವೇತನ ನೀಡುವುದಾಗಿ ಭರವಸೆ ನೀಡಿದರೂ ಕಳೆದ 8 ತಿಂಗಳಿಂದ ಇಲ್ಲಿಯವರೆಗೂ ಯಾವುದೇ ಕಿಂಚಿತ್ ವೇತನ ನೀಡಲೇ ಇಲ್ಲ ಎಂದು ನೊಂದ ಅತಿಥಿ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಜಂಟಿ ನಿರ್ದೇಶಕರು ಮಾತನಾಡಿ, ಈ ಕೂಡಲೇ 2 ತಿಂಗಳ ಸಂಬಳವನ್ನು ಪಾವತಿಸುವಂತೆ ಕಾಲೇಜುಗಳಿಗೆ ಆದೇಶ ನೀಡಿದ್ದೇವೆ. ಬಜೆಟ್ನಲ್ಲಿ ತೆಗೆದಿರಿಸಿದ ಬಾಕಿ ಸಂಬಳವನ್ನು ಎ.5 ರೊಳಗೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ ಎಂದು ಆಶ್ವಾಸನೆ ನೀಡಿದರು.
ಇಂದಿನಿಂದ ಅತಿಥಿ ಉಪನ್ಯಾಸಕರು ತರಗತಿಗೆ ಹಾಜರಾಗಿ ಪಾಠಪ್ರವಚನ ಮಾಡಲಿದ್ದಾರೆ. ಅಧಿಕಾರಿಗಳು ನೀಡಿದ ಗಡುವಿನೊಳಗೆ ವೇತನ ನೀಡದಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಅತಿಥಿ ಉಪನ್ಯಾಸಕರ ಉಗ್ರ ಹೋರಾಟ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ರಂಜಿತ್ ಕುಮಾರ್ ವಕ್ವಾಡಿ ಹೇಳಿಕೆ ನೀಡಿದ್ದಾರೆ.
ಕುಂದಾಪ್ರ ಡಾಟ್ ಕಾಂ - editor@kundapra.com