ಉಡುಪಿ: ಭಾರತೀಯ ನಾಟಕಗಳು ವಿಶ್ವಮಟ್ಟದಲ್ಲಿ ಎದ್ದು ಕಾಣುವಂತಹವು. ತಮ್ಮ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ವಸ್ತು ವಿಶ್ಲೇಷಣೆ ಮಾಡುವ ಅವು ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ ಎಂದು ಕವಿ, ನಾಟಕಕಾರ ರಾಮದಾಸ್ ಅವರು ಹೇಳಿದರು.
ಮಂಗಳೂರು ಆಕಾಶವಾಣಿ ಕೇಂದ್ರವು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಡಾ. ಗಿರೀಶ್ ಕಾರ್ನಾಡರ ‘ಬೆಂದಕಾಳು ಓನ ಟೋಸ್ಟ್’ ಎಂಬ ಹೊಸ ನಾಟಕದ ಚೊಚ್ಚಲ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಂಗಳೂರು ಆಕಾಶವಾಣಿ ನಡೆಸುವ ನಾಟಕಗಳೆಂದರೆ ವಿಶೇಷ ಮತ್ತು ವಿಶಿಷ್ಟ ರೀತಿಯವು. ಈಗಲೂ ಜನ ಆಕಾಶವಾಣಿ ಪ್ರಸಾರ ಮಾಡುವ ನಾಟಕಗಳನ್ನು ಕೇಳಲು ಕಾತುರರಾಗಿದ್ದಾರೆ. ಇದೀಗ ರಂಗನಾಟಕವನ್ನು ಸಂಘಟಿಸಿರುವುದು ಪ್ರಶಂಸನೀಯ ಎಂದವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಂಗ ನಿರ್ದೇಶಕ ಚಿದಂಬರ ರಾವ್ ಜಂಬೆ ಅವರು ನಾಟಕವೊಂದು ನಿರ್ದೇಶಕನಿಗೆ ಸವಾಲೊಡ್ಡಬೇಕು. ಆಗ ಮಾತ್ರ ಆತ ಹೊಸ ಸಂದೇಶವೊಂದನ್ನು ನೀಡಲು ಸಾಧ್ಯ ಎಂದರು.
ಸಭಾಧ್ಯಕ್ಷತೆಯನ್ನು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ. ವಸಂತಕುಮಾರ ಪೆರ್ಲ ಅವರು ವಹಿಸಿದ್ದರು. ಒಂದು ಮಾಧ್ಯಮವಾದ ಆಕಾಶವಾಣಿಯು ಕಲೆ, ಸಾಹಿತ್ಯ, ಸಂಗೀತ, ಸಂಸ್ಕøತಿಗಳನ್ನು ಪೋಣಿಸುವ ಸಾಂಸ್ಕøತಿಕ ವಕ್ತಾರನೂ ಹೌದು. ಶ್ರೋತೃಗಳೊಂದಿಗೆ ಆಕಾಶವಾಣಿ ಸಂವಹನ ನಡೆಸುವ ಹಾಗೆ ಆಕಾಶವಾಣಿಯೊಂದಿಗೆ ಶ್ರೋತೃಗಳೂ ಸಂವಹನ ನಡೆಸಬೇಕು. ಈ ದ್ವಿಮುಖ ಸಂವಹನ ಇದ್ದಾಗ ಮಾತ್ರ ಸಾರ್ಥಕ ಸೇವೆ ಸಲ್ಲಿಸಲು ಸಾಧ್ಯ. ಮಂಗಳೂರು ಆಕಾಶವಾಣಿಗೆ ಸುಮಾರು ಮೂವತ್ತು ಲಕ್ಷ ಮಂದಿ ಕೇಳುಗರಿದ್ದಾರೆ ಎಂಬುದೇ ಈ ದ್ವಿಮುಖ ಸಂವಹನ ಫಲಪ್ರದವಾಗಿದೆ ಎಂಬುದಕ್ಕೆ ಸಾಕ್ಷಿ ಎಂದರು.
ಸಾಂಸ್ಕøತಿಕ ಜಿಲ್ಲೆಯ ನಾಟಕ, ಯಕ್ಷಗಾನ, ಸಂಗೀತ, ಜಾನಪದ ಮೊದಲಾದ ಕಲಾಪ್ರಕಾರಗಳ ಬೆಳವಣಿಗೆಗೆ ಆಕಾಶವಾಣಿ ಬದ್ದವಾಗಿದೆ ಎಂದು ಡಾ. ಪೆರ್ಲ ಹೇಳಿದರು.
ಪ್ರಸಾರ ನಿವಾಹಕ ಡಾ ಶರಭೇಂದ್ರ ಸ್ವಾಮಿ ನಿರೂಪಿಸಿದರು. ಕಾರ್ಯಕ್ರಮ ನಿರ್ವಾಹಕ ಸದಾನಂದ ಹೊಳ್ಳ ಸ್ವಾಗತಿಸಿದರು. ಪ್ರಸಾರ ನಿರ್ವಾಹಕ ನವೀನಕುಮಾರ ಕದ್ರಿ ವಂದಿಸಿದರು.
ನಾಟಕದ ಪಾತ್ರವೊಂದಕ್ಕೆ ಪ್ರಸಾಧನ ಮಾಡುವ ಮೂಲಕ ಮುಖವಣಿಕೆ ಬಿಡಿಸಿ ಆರಂಭದಲ್ಲಿ ರಾಮದಾಸ್ ಉದ್ಘಾಟಿಸಿದರು. ಬಳಿಕ ಚಿದಂಬರ ರಾವ್ ಜಂಬೆ ನಿರ್ದೇಶನದಲ್ಲಿ ಡಾ. ಗಿರೀಶ್ ಕಾರ್ನಾಡರ ‘ಬೆಂದಕಾಳು ಓನ್ ಟೋಸ್ಟ್’ ನಾಟಕವನ್ನು ಉಡುಪಿಯ ರಂಗಭೂಮಿ ಕಲಾವಿದರು ಪ್ರದರ್ಶಿಸಿದರು.
ಪ್ರಸ್ತುತ ಕಾಸ್ಮೋಮೆಟ್ರೋಪಾಲಿಟನ್ ಪಟ್ಟಣದಲ್ಲಿರುವ ಜೀವನ ಶೈಲಿಯನ್ನು ನಾಟಕದಲ್ಲಿ ಅಳವಡಿಸಿಕೊಳ್ಳಲಾಗಿತ್ತು. ನವಿರಾದ ಹಾಸ್ಯ, ಸಂಸಾರದ ಒಳಗಿನ ಸಂಬಂಧ ಹಾಗೂ ಆಡಂಬರದ ಜೀವನ ಶೈಲಿಯ ಕಥಾ ವಸ್ತು ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು.
ಕುಂದಾಪ್ರ ಡಾಟ್ ಕಾಂ - editor@kundapra.com