ಕುಂದಾಪುರ: ಕ್ಷೇತ್ರ ಮಹಾತ್ಮೆಯ ಸರದಾರ, ಜ್ಯೋತಿಷ್ಯ ತಜ್ಞ ಬಸವರಾಜ ಶೆಟ್ಟಿಗಾರರಿಗೆ ವಿವಿಧ ರಂಗಗಳಲ್ಲಿ ಕಳೆದ 25 ವರ್ಷಗಳಿಂದ ಮಾಡಿದ ಸಾಧನೆಯನ್ನು ಗುರುತಿಸಿ ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾ ಪರಮೇಶ್ವರಿ ದೇವಸ್ಥಾನ ಹಾಗೂ ಕಲಾಭಿಮಾನಿಗಳ ವತಿಯಿಂದ ಸಮಾಜರತ್ನ ಬಿರುದು ಪ್ರದಾನ ಮಾಡಲಾಯಿತು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಸಸ್ತಿ ಪ್ರದಾನಿಸಿದರು.
ಯಕ್ಷಗಾನ ರಂಗಕ್ಕೆ ಆರು ವರ್ಷದಲ್ಲಿ 13 ಕ್ಷೇತ್ರ ಮಹಾತ್ಮೆಯನ್ನು ವಿಭಿನ್ನವಾಗಿ ಬರೆದು ರಂಗಕ್ಕೆ ನೀಡಿ ದಾಖಲೆ ನಿರ್ಮಿಸಿದ ವಾಸ್ತು ತಜ್ಞ ಬಸವರಾಜ ಶೆಟ್ಟಿಗಾರರು ರಚಿಸಿದ 29ನೇ ಕ್ಷೇತ್ರ ಪುರಾಣವನ್ನೊಳಗೊಂಡ ಶ್ರೀ ಸಾಲಿಕೇರಿ ಕ್ಷೇತ್ರ ಮಹಾತ್ಮೆ ಎಂಬ ನೂತನ ಪ್ರಸಂಗವನ್ನೂ ಸಚಿವರು ಇದೆ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀನಿವಾಸ ಪೂಜಾರಿ, ಯಕ್ಷಗಾನ ಕ್ಷೇತ್ರದಲ್ಲಿ ಅಪ್ರತಿಮೆ ಸಾಧನೆ ಮಾಡುವುದರ ಮೂಲಕ ಕ್ಷೇತ್ರ ಮಹಾತ್ಮೆ ಪ್ರಸಂಗಗಳ ಸೃಷ್ಟಿಕರ್ತರಾಗಿ ಯಕ್ಷಗಾನ ಕಲೆಯನ್ನು ನಾಡಿನುದ್ದಗಲಕ್ಕೂ ಪಸರಿಸುವಲ್ಲಿ ತಮ್ಮದೆ ವಿಶಿಷ್ಟ ಕೊಡುಗೆ ನೀಡಿದ ಶೆಟ್ಟಿಗಾರರ ಸಾಧನೆ ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾಶಿವ ಶೆಟ್ಟಿಗಾರರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ಪುರಂದರ ಡಿ ಶೆಟ್ಟಿಗಾರ್, ವಕೀಲ ವಿಠಲ ಶೆಟ್ಟಿಗಾರ್, ದೇವಳದ ಸಹ ಮೊಕ್ತೇಸರ ರಘುರಾಮ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಶೆಟ್ಟಿಗಾರ್ ಸ್ವಾಗತಿಸಿದರು. ಮಂಗಳುರು ಜಯರಾಮ್ ಅಭಿನಂದನಾ ಪತ್ರ ವಾಚಿಸಿದರು. ಅಚ್ಚುತ್ ಶೆಟ್ಟಿಗಾರ್ ಕಾರ್ಯಕ್ರಮ ನಿರ್ವಹಿಸಿ ವಮದಿಸಿದರು. ಸಭಾ ಕಾರ್ಯಕ್ರಮದ ನಂತರ ಶ್ರೀ ಕ್ಷೇತ್ರ ಹಾಲಾಡಿ ಮೇಳದವರಿಂದ ಶ್ರೀ ಸಾಲಿಕೇರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗ ನಡೆಯಿತು.
ಕುಂದಾಪ್ರ ಡಾಟ್ ಕಾಂ - editor@kundapra.com