ಮರವಂತೆ: ಇಲ್ಲಿನ ಐದು ಅಂಗನವಾಡಿಗಳ ಪುಠಾಣಿಗಳಿಗೆ, ಎರಡು ಕಿರಿಯ, ಒಂದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಒಂದು ಪ್ರೌಢಶಾಲೆಯ ಒಟ್ಟು 650 ಮಕ್ಕಳಿಗೆ, ಶನಿವಾರ ಸಂಭ್ರಮದ ದಿನ. ಬೆಳಿಗ್ಗೆ ಶಾಲೆಯಲ್ಲಿ ಸಿಹಿ ದೊರಕಿತ್ತು. ಮಧ್ಯಾಹ್ನದ ಬಳಿಕ ಅಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಧನಾ ಮಂಟಪದಲ್ಲಿ ಶಿಕ್ಷಕರ, ಪೋಷಕರ ಮುಂದೆ ಹಾಡು, ನೃತ್ಯ, ಕೋಲಾಟ, ಪ್ರಹಸನದ ಮೂಲಕ ಪ್ರತಿಭೆ ಪ್ರದರ್ಶಿಸುವ ಅವಕಾಶ ಅವರದಾಯಿತು. ಅದರ ಪೂರ್ವಭಾವಿಯಾಗಿ ಮಕ್ಕಳೇ ನಿರ್ವಹಿಸಿದ ಮಕ್ಕಳ ಸಭೆ. ಅದರಲ್ಲಿ ಆಯಾ ಸಂಸ್ಥೆಗಳ ಮಟ್ಟದಲ್ಲಿ ಈ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಪ್ರತಿಭಾ ಪುರಸ್ಕಾರ. ಇವೆಲ್ಲಕ್ಕೆ ಕಾರಣ ಅಲ್ಲಿನ ಸೇವಾ ಸಾಂಸ್ಕೃತಿಕ ವೇದಿಕೆ 'ಸಾಧನಾ' ಹಿಂದಿನ ವರ್ಷಗಳಂತೆ ಆಯೋಜಿಸಿದ್ದ 'ಮಕ್ಕಳ ಮೇಳ'. ಸಾಧನಾ ಈ ಅಪೂರ್ವ ಕಾರ್ಯಕ್ರಮವನ್ನು ಶಾಲೆಗಳ ಶಿಕ್ಷಕರ ನೆರವಿನಿಂದ ಕಳೆದ 25 ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ.
ಈ ಬಾರಿಯ ಸಾಧನಾ ಮಕ್ಕಳ ಮೇಳದ ಅಧ್ಯಕ್ಷತೆ ವಹಿಸುವ ಅವಕಾಶ ದೊರಕಿದ್ದು ಪ್ರೌಢಶಾಲೆಯ ವಿದ್ಯಾರ್ಥಿ ಪ್ರತಿನಿಧಿ ಕೀರ್ತನ್ಕುಮಾರ್ಗೆ. ಆತ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಸಾಧನಾದ ಈ ಉಪಕ್ರಮ ಊರ ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುತ್ತದೆ. ಪ್ರತಿಭೆಯ ವಿಕಾಸಕ್ಕೆ ಅವಕಾಶ ಕಲ್ಪಿಸುತ್ತದೆ. ಇದನ್ನು ಮಕ್ಕಳು ತಮ್ಮ ಮೇಲ್ಮೆಗಾಗಿ ಬಳಸಿಕೊಳ್ಳಬೇಕು ಎಂದು ತನ್ನ ಸಹಪಾಠಿಗಳಿಗೆ ಕರೆಯಿತ್ತ.
ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ನಾಯಕ ಪುನೀತ್ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದ. ಕರಾವಳಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮಹಮದ್ ಅಬ್ದುಲ್ ಬಾಸಿತ್ ಸ್ವಾಗತಿಸಿದರೆ, ಪೂರ್ವ ಶಾಲೆಯ ಶ್ರೀವತ್ಸ ವಂದನೆ ಸಲ್ಲಿಸಿದ. ಪ್ರೌಢಶಾಲೆಯ ನಿಧಿ ಕಾರ್ಯಕ್ರಮ ನಿರೂಪಿಸಿದಳು. ಸಾಧನಾ ಮತ್ತು ಶಿಕ್ಷರು ಜೊತೆಗೂಡಿ ನಡೆಸಿದ ಈ ಮಕ್ಕಳ ಮೇಳ ಸೇರಿದ್ದ ಹಿರಿಯರ, ಕಿರಿಯರ ಮೆಚ್ಚುಗೆ ಗಳಿಸಿತು.
ಕುಂದಾಪ್ರ ಡಾಟ್ ಕಾಂ - editor@kundapra.com