ಸಾಹಿತ್ಯಕ್ಕೆ ರೂಪದ ಹಂಗಿಲ್ಲ: ಡಾ. ವಿ. ಕೆ. ಪೆರ್ಲ

ಮಂಗಳೂರು: ಸಾಹಿತ್ಯವು ಶಕ್ತಿಶಾಲೀ ಭಾವನೆಗಳ ಸುಂದರ ಅಭಿವ್ಯಕ್ತಿ. ಅದಕ್ಕೆ ರೂಪದ ಹಂಗಿಲ್ಲ. ಮನುಷ್ಯನು ಪಂಚೇಂದ್ರಿಯಗಳ ಮೂಲಕ ಪಡೆದುಕೊಂಡ ಅನುಭವಗಳು ಜ್ಞಾನವಾಗಿ ಅನಂತರ ತನ್ನ ವೈಯಕ್ತಿಕ ವಿಶ್ಲೇಷಕ ಶಕ್ತಿಯಿಂದ ಅದು ಅರಿವಾಗಿ ಪರಿವರ್ತಿಸಲ್ಪಟ್ಟ ಬಳಿಕ ಇತರರಿಗೆ ಹೇಳಬೇಕೆಂಬ ತುಡಿತದಲ್ಲಿ ಅಭಿವ್ಯಕ್ತಿಗೊಂಡುದೇ ಸಾಹಿತ್ಯ. ಶಾಬ್ದಿಕ ಅಭಿವ್ಯಕ್ತಿ ಅಲ್ಲ ಅನ್ನುವುದನ್ನು ಬಿಟ್ಟರೆ ತಾಂತ್ರಿಕ ಆವಿಷ್ಕಾರಗಳು ಕೂಡ ಮನುಷ್ಯನ ಪ್ರತಿಭೆಯ ಅನಾವರಣವೇ ಆಗಿದೆ ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ. ವಸಂತ ಕುಮಾರ ಪೆರ್ಲ ಅವರು ಹೇಳಿದರು. 
   ನಗರದಲ್ಲಿ ತನ್ನ ನಿವಾಸ 'ಭೂಮಿಗೀತ'ದಲ್ಲಿ ಕಾರ್ಕಳ ಭುವನೇಂದ್ರ ಕಾಲೇಜಿನ ಸಾಹಿತ್ಯ ಸಂಘದ ವಿದ್ಯಾರ್ಥಿಗಳು ನಡೆಸಿಕೊಟ್ಟ 'ಸಾಹಿತಿಯೊಂದಿಗೆ ಸಂವಾದ' ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು. 
    ಸಾಹಿತ್ಯ ರಚನೆಗೆ ವಿಶಾಲವಾದ ಓದು ಅವಶ್ಯ. ಜೊತೆಗೆ ಲೋಕಾನುಭವವೂ ಬೇಕು. ವಿಶಿಷ್ಟ ರೀತಿಯಲ್ಲಿ ಹೇಳುವ ಕಲೆಯನ್ನು ಸಿದ್ಧಿಸಿಕೊಳ್ಳಬೇಕು. ಅದು ನಿರಂತರ ಪ್ರಯತ್ನದ ಮೂಲಕ ಬರುತ್ತದೆ. ಬರೆಯುವಾಗ ಅಡಕತೆ, ಸಂಕ್ಷಿಪ್ತತೆ, ಭಾವದೀಪ್ತತೆ ಮೊದಲಾದ ಅಂಶಗಳ ಕಡೆಗೆ ಗಮನ ನೀಡಬೇಕು ಎಂದು ಡಾ. ಪೆರ್ಲ ಹೇಳಿದರು. 
    ಕಾಲಕಾಲಕ್ಕೆ ಸಾಹಿತ್ಯದ ಬಗೆಗಿನ ಆಲೋಚನೆಗಳು, ನಿರ್ವಚನಗಳು ಬದಲಾಗುತ್ತವೆ. ಪ್ರತಿಯೊಂದು ತಲೆಮಾರಿನಲ್ಲಿಯೂ ತಾವು ಕಂಡುಂಡ ಜೀವನಾನುಭವಗಳನ್ನು ಹೇಳುವ ತುಡಿತ ಇದ್ದೇ ಇರುತ್ತದೆ ಎಂದು ಅವರು ಹೇಳಿದರು. 
    ಅನಂತರ ವಿದ್ಯಾರ್ಥಿಗಳು ಪ್ರಶ್ನೋತ್ತರ, ಸಂವಾದ ನಡೆಸಿದರು. ಕವಿಯ ನಿವಾಸ, ಗ್ರಂಥಾಲಯಗಳನ್ನು ವೀಕ್ಷಿಸಿ ಮನೆಯಲ್ಲಿ ಕವಿಯೋರ್ವ ಸೃಜನಶೀಲತೆಯಲ್ಲಿ ಕಳೆಯುವ ಹಾಗು ಸಾಹಿತ್ಯಕೃಷಿ ನಡೆಸುವ ವಿಧಾನವನ್ನು ವೈಯಕ್ತಿಕವಾಗಿ ಹತ್ತಿರದಿಂದ ಗಮನಿಸಿದರು. 
   ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಎಸ್. ಆರ್. ಅರುಣಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಪೂಜಿತಾ ವರ್ಮ ಜೈನ ವಂದಿಸಿದರು. 
ಕುಂದಾಪ್ರ ಡಾಟ್ ಕಾಂ - editor@kundapra.com
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com