ಕುಂದಾಪುರ: ಸ್ವಚ್ಚತೆಗೆ ಆದ್ಯತೆ ನೀಡಿ ರಾಷ್ಟ್ರ ಮಟ್ಟದಲ್ಲಿ ಹೆಸರು ಸಂಪಾದಿಸಿರುವ ಕುಂದಾಪುರ ಪುರಸಭೆ ವ್ಯಾಪ್ತಿಯೊಳಗಡೆ ಸದ್ದಿಲ್ಲದೆ ಡಂಪಿಂಗ್ ಯಾರ್ಡ್ ತಲೆ ಎತ್ತಿದೆ.
ಕುಂದಾಪುರ ನಗರದ ಹಳೆ ಅಂಚೆ ಕಚೇರಿ ಎದುರಿನಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯ ಪಕ್ಕದಲ್ಲೇ ಅಪಾರ ಪ್ರಮಾಣದ ತ್ಯಾಜ್ಯ ಎಸೆಯಲಾಗಿದೆ. ಅಲ್ಲಿ ತ್ಯಾಜ್ಯದ ಗುಡ್ಡೆಯೇ ಸೃಷ್ಟಿಯಾಗಿದೆ. ಕಾಂಕ್ರೀಟ್ ರಸ್ತೆಗೆ ತಾಗಿಕೊಂಡಿರುವ ಈ ಖಾಲಿ ಸ್ಥಳದಲ್ಲಿ ನಗರದ ಅಷ್ಟು ತ್ಯಾಜ್ಯ ಎಸೆಯುವ ವಿದ್ಯಮಾನ ಕಂಡುಬಂದಿದೆ. ಪ್ಲಾಸ್ಟಿಕ್, ಔಷಧೀಯ ತ್ಯಾಜ್ಯಗಳು ಸೇರಿದಂತೆ ಎಲ್ಲ ರೀತಿಯ ಕೊಳಕು ತ್ಯಾಜ್ಯದ ಸಂಗ್ರಹ ಇಲ್ಲಿ ಕಣ್ಣಿಗೆ ರಾಚುತ್ತಿದೆ. ದಾರಿಹೋಕರು, ವಾಹನ ಸವಾರರು ಮೂಗುಮುಚ್ಚಿಕೊಂಡು ಸಂಚರಿಸುವಂತಾಗಿದೆ. ಅಕ್ಕಪಕ್ಕದ ನಿವಾಸಿಗಳು ತ್ಯಾಜ್ಯದಿಂದ ಕಂಗೆಟ್ಟಿದ್ದಾರೆ. ಕತ್ತಲಾಗುತ್ತಿರುವಂತೆ ತ್ಯಾಜ್ಯ ತಂದು ಸುರಿದು ಹೋಗಲಾಗುತ್ತಿದ್ದು, ಪುರಸಭೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ತ್ಯಾಜ್ಯದಿಂದಾಗಿ ಜಾನುವಾರುಗಳಿಗೂ, ಮನುಷ್ಯರಿಗೂ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವುದರಿಂದ ಪುರಸಭೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೃಪೆ: ವಿ.ಕ
ಕುಂದಾಪ್ರ ಡಾಟ್ ಕಾಂ - editor@kundapra.com