ಕುಂದಾಪುರ: ಎಪಿಎಲ್-ಬಿಪಿಎಲ್ ಎಂಬ ವ್ಯತ್ಯಾಸ ಇಲ್ಲದೇ ಎಲ್ಲರಿಗೂ ಪಡಿತರ ಚೀಟಿ ನೀಡಲು ಸರಕಾರ ಮುಂದಾಗಬೇಕು. ಈಗಾಗಲೇ ರದ್ದುಪಡಿಸಿದ ಪಡಿತರ ಚೀಟಿಗಳನ್ನು ಪುನಃ ಪಡಿತರದಾರರಿಗೆ ನೀಡಬೇಕೆಂದು ಒತ್ತಾಯಿಸಿ ಮಾ 14 ರಂದು ಜಿಲ್ಲಾ ವ್ಯಾಪಿ ಪ್ರತಿಭಟಿಸಬೇಕೆಂದು ಪಕ್ಷದ ಮತ್ತು ಕಾರ್ಮಿಕ ಸಂಘಗಳ ಸದಸ್ಯರಿಗೆ ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಕರೆ ನಿಡಿದೆ.
ಉಡುಪಿ ಜಿಲ್ಲೆಯಲ್ಲಿ ಸಾವಿರಾರು ಪಡಿತರ ಚೀಟಿಗಳನ್ನು ನಕಲಿ ಚೀಟಿಗಳೆಂದು ಏಕಪಕ್ಷೀಯವಾಗಿ ಘೋಷಣೆ ಮಾಡಿ ಅವುಗಳನ್ನು ರದ್ದು ಮಾಡಿದ್ದು, ಜನಸಾಮಾನ್ಯರಲ್ಲಿ ತೀವ್ರ ದಿಗಿಲು ಹುಟ್ಟಿಸಿದೆ. ರದ್ದಾದ ಪಡಿತರ ಚೀಟಿಗಳಲ್ಲಿ ಎಪಿಎಲ್ ಬಿಪಿಎಲ್ ಚೀಟಿಗಳಿವೆ. ವಿದ್ಯುತ್ ಇಲ್ಲ ಹಾಗೂ ವಿದ್ಯುತ್ ಬಿಲ್ ಪಾವತಿ ಮಾಡಲಿಲ್ಲವೆಂಬ ಕಾರಣಗಳಿಂದ ಏಕಪಕ್ಷೀಯವಾಗಿ ರದ್ದು ಮಾಡುವುದು ತೀರಾ ಅನ್ಯಾಯ. ಅಧಿಕಾರಿಗಳ ಪ್ರಕಾರ, ಅಜರ್ಿದಾರರು ನೀಡಿದ ಮಾಹಿತಿಗಳು ಇಂಟರ್ನೆಟ್ನಲ್ಲಿರುವ ಅವರ ಮನೆ ಸಂಖ್ಯೆ, ವಿದ್ಯುತ್ ಮೀಟರ್ ಸಂಖ್ಯೆಗಳೊಂದಿಗೆ ತಾಳೆಯಾಗದಿರುವುದರಿಂದ ಅಂತಹ ಪಡಿತರ ಚೀಟಿಗಳನ್ನು ನಕಲಿ ಎಂದು ಪರಿಗಣಿಸಲಾಗಿದೆ. ಈ ರೀತಿಯಾಗಿ ಅನರ್ಹಗೊಂಡ ಪಡಿತರದಾರರಿಗೆ ತಮ್ಮ ತಮ್ಮ ಸಮರ್ಥನೆಯನ್ನು ಸಲ್ಲಿಸಲು ಅವಕಾಶವನ್ನೇ ನೀಡಲಾಗಿಲ್ಲ. ನೀಡಲಾದ ಮಾಹಿತಿಗಳಲ್ಲಿ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸಿಕೊಡಲು ಅವಕಾಶ ಕೊಟ್ಟಿಲ್ಲ. ಉದಾಹರಣೆಗೆ ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಕುಟುಂಬಗಳು ವಾಸವಿದ್ದರೆ ಅವರಿಗೆ ಪ್ರತ್ಯೇಕ ಪಡಿತರ ಚೀಟಿ ಪಡೆಯುವ ಹಕ್ಕು ಇರುತ್ತದೆ. ಇದ್ಯಾವುದನ್ನು ಪರಿಗಣಿಸದೆ ಪಡಿತರ ಚೀಟಿಗಳನ್ನು ನಕಲಿ ಎಂದು ಪರಿಗಣಿಸಿ ರದ್ದು ಮಾಡಿರುವುದು ದೊಡ್ಡ ಅನ್ಯಾಯವಾಗಿದ್ದು ಇದರ ವಿರುದ್ಧ ಸಿಪಿಐ(ಎಂ) ಪ್ರತಿಭಟಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ - editor@kundapra.com