ಹಂಗಾರಕಟ್ಟೆ: ಖ್ಯಾತ ಭಾಗವತರಾದ ದಿವಂಗತ ನಾರಣಪ್ಪ ಉಪ್ಪೂರರ ಪುತ್ರ ದಿನೇಶ ಉಪ್ಪೂರ ಇವರು ರಚಿಸಿರುವ ಚಂದ್ರನಖಿ ಎಂಬ ಯಕ್ಷಗಾನ ಪ್ರಸಂಗ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ನಡೆಯಿತು.
ಪುಸ್ತಕ ಬಿಡುಗಡೆ ಮಾಡಿದ ಖ್ಯಾತ ಯಕ್ಷಗಾನ ವಿದ್ವಾಂಸ ಪ್ರೊ.ಎಂ.ಎ. ಹೆಗಡೆ ಮಾತನಾಡುತ್ತಾ ಯಕ್ಷಗಾನ ಪ್ರಸಂಗಕರ್ತನು ಯಕ್ಷಗಾನದ ಸರ್ವಾಂಗಳನ್ನು ತಿಳಿದಿರಬೇಕು. ಏಕಕಾಲಕ್ಕೆ ಭಾಗವತ, ನಟ, ಪ್ರೇಕ್ಷಕ ಈ ಎಲ್ಲರನ್ನೂ ತೃಪ್ತಿ ಪಡಿಸುವ ರೀತಿಯಲ್ಲಿ ಪದ್ಯಗಳನ್ನು ರಚಿಸಬೇಕು. ಸರಳವಾದ ಭಾಷೆಯಲ್ಲಿ ಅರ್ಥವತ್ತಾದ ರಚನೆಗಳನ್ನು ಮಾಡುವ ಸವಾಲನ್ನು ಎದುರಿಸಬೇಕಾಗುತ್ತದೆ ಎಂದರು.
ಪ್ರಸಂಗ ಬರೆಯುವುದು ಸುಲಭ, ಆದರೆ ಒಳ್ಳೆಯ ಪ್ರಸಂಗವನ್ನು ಬರೆಯುವುದು ತುಂಬ ಕಷ್ಟ. ಈ ದೃಷ್ಟಿಯಿಂದ ಪ್ರಸ್ತುತ ಪ್ರಸಂಗಕರ್ತರು ಸಾಕಷ್ಟು ಯಶಸ್ವಿಯಾಗಿದ್ದಾರೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಎಸ್.ಎನ್. ಹೆಬ್ಬಾರ ವಹಿಸಿದ್ದರು. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಸದಸ್ಯ ಸುಬ್ರಹ್ಮಣ್ಯ ಧಾರೇಶ್ವರ, ಕಲಾಭವನದ ಅಧ್ಯಕ್ಷ ವೈಕುಂಠ ಹೆಬ್ಬಾರ, ಪ್ರಸಂಗಕರ್ತ ದಿನೇಶ ಉಪ್ಪೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮ ನಿರ್ವಹಣೆಯನ್ನು ಶ್ರೀಧರ ಉಪ್ಪೂರ, ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಸ್ವಾಗತಿಸಿದರು. ದಿನೇಶ ಉಪ್ಪೂರ ವಂದಿಸಿದರು.
ಸಭಾಕಾರ್ಯಕ್ರಮದ ನಂತರ ಖ್ಯಾತ ಭಾಗವತರಿಂದ ಚಂದ್ರನಖಿ ಪ್ರಸಂಗದ ಭಾಗವತಿಕೆ ಏರ್ಪಡಿಸಲಾಗಿತ್ತು.
ಕುಂದಾಪ್ರ ಡಾಟ್ ಕಾಂ - editor@kundapra.com