ವಿಪ್ರವಾಣಿ ಸಂಚಿಕೆ ಬಿಡುಗಡೆ
ಕುಂದಾಪುರ: ಬ್ರಾಹ್ಮಣ ಎಂದರೆ ಜಾತಿ ಅಲ್ಲ. ವ್ಯಕ್ತಿಗೆ ಆತನ ಕರ್ಮಾನುಷ್ಠಾನದಿಂದ ಬರುವ ಯೋಗ್ಯತೆ ಅದು. ಗಾಯತ್ರಿ ಅನುಷ್ಠಾನ, ಸಂಧ್ಯಾವಂದನೆ ಬ್ರಾಹ್ಮಣರಿಗೆ ಮುಖ್ಯ. ಅನುಷ್ಠಾನ ತೊರೆದವನ ಕುಟುಂಬ ಅಭಿವೃದ್ಧಿ ಹೊಂದದು. ಶೀಲ ಮತ್ತು ದಾನಗುಣ ಎರಡೂ ಬ್ರಾಹ್ಮಣನಿಗೆ ಅವಶ್ಯವಾಗಿ ಇರಬೇಕು. ಇಲ್ಲವಾದರೆ ಅಷ್ಟೈಶ್ವರ್ಯಗಳಿದ್ದರೂ ರಾವಣನಂತೆಯೇ ವಿನಾಶ ಖಂಡಿತ. ವಿಪ್ರ ವರ್ಗದಲ್ಲಿ ಅನುಷ್ಠಾನಗಳ ಮಹತ್ವದ ಅರಿವು ಮೂಡಿಸಲು ಬ್ರಾಹ್ಮಣ ಪರಿಷತ್ ಮುಂದಾಗಬೇಕು ಎಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೋ. ಎಸ್. ನಾರಾಯಣ ರಾವ್ ಕರೆ ನೀಡಿದರು.
ಕೊಟೇಶ್ವರ ಶ್ರೀ ವಾದಿರಾಜ ಕಲ್ಯಾಣ ಮಂಟಪದಲ್ಲಿ ನಡೆದ ಕುಂದಾಪುರ ತಾಲೂಕು ಬ್ರಾಹ್ಮಣ ಪರಿಷತ್ನ ಮುಖವಾಣಿ 'ವಿಪ್ರವಾಣಿ' 59 ನೇ ಸಂಚಿಕೆಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಷಟ್ಕರ್ಮಗಳ ಮಹತ್ವವನ್ನು ವಿವರಿಸಿದರು.
ವಿಪ್ರವಾಣಿ ಸಂಚಿಕೆ ಪ್ರಾಯೋಜಕ ಬಿ. ಹರೀಶ್ ಭಟ್ ಪತ್ನಿ ಶಾರದಾ ಭಟ್ ಜತೆಗೂಡಿ ಸಂಚಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಭಟ್ ದಂಪತಿಯನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಆಜೀವ ಸದಸ್ಯರನ್ನು ಗೌರವಿಸಲಾಯಿತು.
ಪರಿಷತ್ ಅಧ್ಯಕ್ಷ ಕೆ. ಶ್ರೀನಿವಾಸ ಹೆಬ್ಬಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಪ್ರ ವಾಣಿ ಸಂಪಾದಕ ಬಳ್ಕೂರು ಭಾಸ್ಕರ ಉಡುಪ ಸಂಚಿಕೆಯ ಬಗ್ಗೆ ಮತನಾಡಿದರು. ಕೋಟೇಶ್ವರ ವಲಯಾಧ್ಯಕ್ಷ ವೆಂಕಟೇಶ ಮೂರ್ತಿ ಭಟ್ ಮತ್ತು ಕೆ.ಜಿ. ವೈದ್ಯ ಅತಿಥಿಗಳನ್ನು ಪರಿಚಯಿಸಿದರು. ತಾಲೂಕಿನ ವಿವಧ ವಲಯಾಧ್ಯಕ್ಷರುಗಳು ಉಪಸ್ಥಿತರಿದ್ದರು. ಯು.ಎಲ್.ವೈದ್ಯ ಸ್ವಾಗತಿಸಿದರು. ಶಂಕರ ರಾವ್ ಕಾರ್ಯಕ್ರಮ ನಿರೂಪಿಸಿ, ಹಳ್ಳಿ ಶ್ರೀನಿವಾಸ ಭಟ್ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com