ಕುಂದಾಪುರ: ವಿಶ್ವಕ್ಕೆ ಬೆಳಕನ್ನು ನೀಡುವ ಸೂರ್ಯ ತನ್ನ ರಥವನ್ನು ಆರೋಹಣ ಮಾಡುವ ಮಾಘ ಸಪ್ತಮಿ ರಥಸಪ್ತಮಿಯ ಪವಿತ್ರ ದಿನದಂದು ಕುಂದಾಪುರದ ಎಲ್ಲಾ ಯೋಗ ಸಾಧಕರು ಲೋಕ ಕಲ್ಯಾಣಾರ್ಥವಾಗಿ ಕುಂದೇಶ್ವರ ದೇವಸ್ಥಾನದ ವಠಾರದಲ್ಲಿ ಸೂರ್ಯಯಜ್ಞ, ಸಾಮೂಹಿಕ ಸೂರ್ಯ ನಮಸ್ಕಾರ ನಡೆಸಿದರು.
ಬ್ರಾಹ್ಮಿ ಮಹೂರ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಮೂರ್ತಿ ಕೆ. ಚಂದ್ರಶೇಖರ ಉಡುಪ ಧಾರ್ಮಿಕ ವಿಧಿ ನೆರವೇರಿಸಿದರು.
ಹರಿದ್ವಾರ ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕ ರಾಜೇಂದ್ರ ಚಕ್ಕೇರ ಸೂರ್ಯಯಜ್ಞ, ರಥಸಪ್ತಮಿಯ ಮಹತ್ವದ ಬಗ್ಗೆ ವಿವರಿಸಿದರು. ನಂತರ ಯೋಗ ಸಾಧಕರಿಂದ ಸಾಮೂಹಿಕ ಸೂರ್ಯನಮಸ್ಕಾರ ನಡೆಯಿತು.
ಡಾ.ಬಿ.ವಿ. ಉಡುಪ ಮಾತನಾಡಿ, ಜಗತ್ತು ವೇದಗಳಿಂದ ಅವಲಂಬಿತವಾಗಿದ್ದು, ಸೂರ್ಯ ನಮಸ್ಕಾರದಿಂದ ಮನುಷ್ಯ ನವಚೈತನ್ಯದಿಂದ ಊರ್ಜಿತಗೊಂಡು ಆರೋಗ್ಯಕರ ಜೀವನದಿಂದ ಸುಖ, ಶಾಂತಿ, ನೆಮ್ಮದಿ ಪಡೆದುಕೊಳ್ಳಬಹುದು ಎಂದರು.
ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಆಚರಿಸಲಾಯಿತು. ವೇದಿಕೆಯಲ್ಲಿ ಯೋಗ ಸಾಧಕರಾದ ಪ್ರದೀಪ ದರೇಕರ್, ಸಂಜೀವ, ಉದ್ಯಮಿ ಕೆ.ಕೆ. ಕಾಂಚನ್, ಶಾಂತರಾಮ್ ಕಾಂಚನ್ ಇದ್ದರು. ಯೋಗ ಶಿಕ್ಷಕ ರಘುವೀರ್ ನಗರ್ಕರ್ ಸ್ವಾಗತಿಸಿ, ನಿರೂಪಿಸಿದರು. ಕೆ. ರಾಮದಾಸ್ ಶೆಣೈ ವಂದಿಸಿದರು.
ಕುಂದಾಪ್ರ ಡಾಟ್ ಕಾಂ - editor@kundapra.com